ಇದು ಡೀಪ್‌ಫೇಕ್‌ ಯುಗ, ಸಂಗಾತಿಯ ವ್ಯಭಿಚಾರದ ಫೋಟೊಗಳು ಸಹ ವಿಚಾರಣೆಯಲ್ಲಿ ಸಾಬೀತಾಗಬೇಕು: ದೆಹಲಿ ಹೈಕೋರ್ಟ್

ತನ್ನ ಪತ್ನಿ ವ್ಯಭಿಚಾರಿ ಎನ್ನುವುದಕ್ಕೆ ಪೂರಕವಾಗಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಛಾಯಾಚಿತ್ರಗಳನ್ನು ಒಪ್ಪದ ನ್ಯಾಯಾಲಯ ನಾವು ಡೀಪ್‌ಫೇಕ್‌ ಯುಗದಲ್ಲಿ ಜೀವಿಸುತ್ತಿದ್ದೇವೆ ಎನ್ನುವ ಕುರಿತು ನ್ಯಾಯಿಕ ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದಿತು.
Deepfake and Delhi High Court
Deepfake and Delhi High Court

ತನ್ನ ಪತ್ನಿ ಮತ್ತು ಮಗುವಿಗೆ ಮಾಸಿಕ ₹ 75,000 ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶವನ್ನು ಈಚೆಗೆ ತಳ್ಳಿಹಾಕಿರುವ ದೆಹಲಿ ಹೈಕೋರ್ಟ್‌ ಪತ್ನಿ ವ್ಯಭಿಚಾರದಲ್ಲಿ ತೊಡಗಿದ್ದಾಳೆ ಎಂದು ಆರೋಪಿಸಿ ಆತ ಸಲ್ಲಿಸಿದ್ದ ಛಾಯಾಚಿತ್ರಗಳು ವಿಚಾರಣೆಯಲ್ಲಿ ಸಾಬೀತಾಗಬೇಕು ಎಂದಿತು.

ಡೀಪ್‌ಫೇಕ್‌ ಬಗ್ಗೆ ಆತಂಕ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ  ರಾಜೀವ್ ಶಕ್ದೇರ್‌ ಮತ್ತು ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಛಾಯಾಚಿತ್ರಗಳನ್ನು ಆಧರಿಸಿ ತೀರ್ಪು ನೀಡಲು ನಿರಾಕರಿಸಿದರು. ಬದಲಿಗೆ ಚಿತ್ರಗಳು ವಿಚಾರಣೆಯಲ್ಲಿ ನೈಜವೆಂದು ಸಾಬೀತಾಗಬೇಕು ಎಂದರು.

“ಚಿತ್ರಗಳನ್ನು ಗಮನಿಸಿದ್ದೇವೆ. ಪ್ರತಿವಾದಿ/ಪತ್ನಿ ಛಾಯಾಚಿತ್ರದಲ್ಲಿರುವ ವ್ಯಕ್ತಿಯೇ ಎಂಬುದು ಸ್ಪಷ್ಟವಾಗಿಲ್ಲ. ನಾವು ಡೀಪ್‌ಫೇಕ್‌ ಯುಗದಲ್ಲಿ ಜೀವಿಸುತ್ತಿದೇವೆ ಎಂಬ ಕುರಿತು ನ್ಯಾಯಾಂಗ ಪರಿಗಣನೆಗೆ ತೆಗೆದುಕೊಳ್ಳಬಹುದು. ಹೀಗಾಗಿ ಇದು ಪತಿ ಬಹುಶಃ ಕೌಟುಂಬಿಕ ನ್ಯಾಯಾಲದೆದುರು ಸಾಕ್ಷ್ಯದ ಮೂಲಕ ಸಾಬೀತುಪಡಿಸಬೇಕಾಗಿರುವ ಅಂಶವಾಗಿದೆ” ಎಂದು ನ್ಯಾಯಾಲಯ ಹೇಳಿತು.

ಪತ್ನಿ ವ್ಯಭಿಚಾರ ನಡೆಸಿದ್ದಾರೆ ಎಂಬ ಬಗ್ಗೆ ಕೌಟುಂಬಿಕ ನ್ಯಾಯಾಲಯದ ಮುಂದೆ ವಾದ ಮಂಡಿಸಲಾಗಿತ್ತು ಎಂಬುದನ್ನು ಸೂಚಿಸುವ ಯಾವ ಅಂಶವನ್ನೂ ಪ್ರಸ್ತಾಪಿಸಲಾಗಿಲ್ಲ ಎಂಬುದನ್ನು  ನ್ಯಾಯಾಲಯ ಗಮನಿಸಿತು.  

ಅಂತೆಯೇ ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಹೈಕೋರ್ಟ್, ಮರುಪರಿಶೀಲನಾ ಅರ್ಜಿ ಸಲ್ಲಿಸುವ ಮೂಲಕ ಕೌಟುಂಬಿಕ ನ್ಯಾಯಾಲಯದೆದುರು ಪತ್ನಿಯ ವ್ಯಭಿಚಾರದ ವಿಚಾರವನ್ನು ಪತಿ ಪ್ರಸ್ತಾಪಿಸಬಹುದು ಎಂದಿತು.

ತನ್ನ ಪತ್ನಿ ಮತ್ತು ಮಗುವಿಗೆ ಮಾಸಿಕ ₹ 75,000 ಜೀವನಾಂಶ ನೀಡಬೇಕೆಂದು ವೃತ್ತಿಯಿಂದ ವಾಸ್ತುಶಿಲ್ಪಿಯಾಗಿರುವ ವ್ಯಕ್ತಿಯೊಬ್ಬರಿಗೆ ಈ ಹಿಂದೆ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಆದರೆ ಪತ್ನಿ ವ್ಯಭಿಚಾರದಲ್ಲಿ ತೊಡಗಿದ್ದಾರೆ ಎಂಬುದು ಪತಿಯ ವಾದವಾಗಿತ್ತು. ಈ ವಾದಕ್ಕೆ ಪೂರಕವಾಗಿ ಅವರು ಸಲ್ಲಿಸಿದ್ದ ಛಾಯಾಚಿತ್ರಗಳನ್ನು ಇದೀಗ ದೆಹಲಿ ಹೈಕೋರ್ಟ್‌ ಒಪ್ಪಿಲ್ಲ.

Kannada Bar & Bench
kannada.barandbench.com