ಬಿಜೆಪಿಯ ಮಾನನಷ್ಟ ಮೊಕದ್ದಮೆ: ಅತಿಶಿಗೆ ಸಮನ್ಸ್ ನೀಡಿದ ದೆಹಲಿ ನ್ಯಾಯಾಲಯ; ಕೇಜ್ರಿವಾಲ್ ವಿರುದ್ಧ ಇಲ್ಲ ಪ್ರಕರಣ

ಪಕ್ಷ ಸೇರಿದರೆ ಹಣ ನೀಡುವುದಾಗಿ ಆಪ್ ನಾಯಕರಿಗೆ ಬಿಜೆಪಿ ಆಮಿಷ ಒಡ್ಡಿತ್ತು ಎಂದು ಹೇಳಿದ್ದ ಕೇಜ್ರಿವಾಲ್ ಮತ್ತು ಅತಿಶಿ ವಿರುದ್ಧ ಬಿಜೆಪಿಯ ದೆಹಲಿ ಮಾಧ್ಯಮ ಮುಖ್ಯಸ್ಥರು ಮಾನನಷ್ಟ ಮೊಕದ್ದಮೆ ಹೂಡಿದ್ದರು.
Arvind Kejriwal and Atishi
Arvind Kejriwal and AtishiTwitter
Published on

ಪಕ್ಷ ಸೇರಿದರೆ ತಲಾ ₹20ರಿಂದ 30 ಕೋಟಿ ಹಣ ನೀಡುವುದಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಿಗೆ ಬಿಜೆಪಿ ಆಮಿಷ ಒಡ್ಡಿತ್ತು ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿಯ ಮಾಧ್ಯಮ ಮುಖ್ಯಸ್ಥ ಪ್ರವೀಣ್ ಶಂಕರ್ ಕಪೂರ್ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆ ಕುರಿತು ದೆಹಲಿಯ ಸಚಿವೆ ಅತಿಶಿ ಅವರಿಗೆ ದೆಹಲಿಯ ನ್ಯಾಯಾಲಯವೊಂದು ಸಮನ್ಸ್‌ ನೀಡಿದೆ.

ಆದರೆ, ಇದೇ ವಿಚಾರವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್‌ ನೀಡುವ ಕುರಿತಂತೆ ಪ್ರಾಥಮಿಕ ಆಧಾರಗಳಿಲ್ಲ ಎಂದು ರೌಸ್‌ ಅವೆನ್ಯೂ ನ್ಯಾಯಾಲಯದ  ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ತಾನ್ಯಾ ಬಾಮ್ನಿಯಾಲ್ ಹೇಳಿದ್ದಾರೆ.

ಆರೋಪಿ ಅತಿಶಿ ಮರ್ಲೆನಾ ಅವರಿಗೆ ಐಪಿಸಿ ಸೆಕ್ಷನ್‌  500ರ ಅಡಿ ಸಮನ್ಸ್‌ ನೀಡಲು ಸಾಕಷ್ಟು ಆಧಾರಗಳಿವೆ ಎಂದು ನ್ಯಾಯಾಲಯ ಹೇಳಿದೆ.

ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಎಎಪಿ ನಾಯಕರನ್ನು ಸಂಪರ್ಕಿಸಿದರೂ ಅವರು ತಮ್ಮನ್ನು ಬೇಟೆಯಾಡಲು ಬಿಜೆಪಿ ಯತ್ನಿಸುತ್ತದೆ ಎಂದೇ ದೂರುತ್ತಾರೆ. ಆದರೆ ಈ ಆರೋಪ ಸಾಬೀತುಪಡಿಸುವಂತಹ ದಾಖಲೆಗಳನ್ನು ಅವರು ನೀಡುತ್ತಿಲ್ಲ ಎಂಬುದಾಗಿ ಬಿಜೆಪಿಯ ಕಪೂರ್‌ ತಮ್ಮ ಮಾನನಷ್ಟ ಮೊಕದ್ದಮೆಯಲ್ಲಿ ಆರೋಪಿಸಿದ್ದರು.

 ಜನವರಿ ಮತ್ತು ಏಪ್ರಿಲ್‌ನಲ್ಲಿ ಕೇಜ್ರಿವಾಲ್‌ ಮತ್ತು ಅತಿಶಿ ಅವರು ನೀಡಿದ ಎರಡು ಹೇಳಿಕೆಗಳನ್ನು ಅವರು ಉಲ್ಲೇಖಿಸಿದ್ದರು. ಬಿಜೆಪಿ 7 ಆಪ್ ಶಾಸಕರನ್ನು ಸಂಪರ್ಕಿಸಿದೆ. ಶಾಸಕರನ್ನು ಪಕ್ಷಾಂತರ ಮಾಡಲು ಬಿಜೆಪಿ ₹25 ಕೋಟಿ ನೀಡುತ್ತಿದೆ. ದೆಹಲಿ ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿದೆ ಎಂದು ಕೇಜ್ರಿವಾಲ್‌ ಆರೋಪಿಸಿದ್ದರು.

ಅಬಕಾರಿ ನೀತಿ ಪ್ರಕರಣದಲ್ಲಿತಮ್ಮ ಹೆಸರು ಕೇಳಿಬಂದಾಕ್ಷಣ ಗಮನ ಬೇರೆಡೆ ಸೆಳೆಯಲು ಅತಿಶಿ ಕೂಡ ಇದೇ ರೀತಿಯ ಆರೋಪಗಳನ್ನು ಮಾಡಿದರು ಎಂದು ಅವರು ಹೇಳಿದ್ದರು.

Kannada Bar & Bench
kannada.barandbench.com