ನಾಯಕರ ಪರೇಡ್ ಮೂಲಕ ರಾಹುಲ್‌ರಿಂದ ನ್ಯಾಯಾಲಯದ ಮೇಲೆ ಒತ್ತಡ: ಮಾನನಷ್ಟ ಮೊಕದ್ದಮೆ ಹೂಡಿದ್ದ ಬಿಜೆಪಿ ಮುಖಂಡನ ಆರೋಪ

ರಾಹುಲ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಾಳೆ (ಗುರುವಾರ) ಸೂರತ್‌ನ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ.
Rahul Gandhi
Rahul GandhiFacebook

ತಮ್ಮ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣದಲ್ಲಿ ವಿಧಿಸಲಾದ ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾಂಗ್ರೆಸ್‌ನ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರನ್ನು ಕರೆತರುವ ಮೂಲಕ ನ್ಯಾಯಾಲಯದ ಮೇಲೆ ಒತ್ತಡ ಹೇರಲು ಪಕ್ಷದ ನಾಯಕ ರಾಹುಲ್‌ ಗಾಂಧಿ ಯತ್ನಿಸುತ್ತಿದ್ದಾರೆ ಎಂದು ಪ್ರಕರಣದ ದೂರುದಾರ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಸೂರತ್‌ ಸೆಷನ್ಸ್‌ ನ್ಯಾಯಾಲಯಕ್ಕೆ ಬುಧವಾರ ತಿಳಿಸಿದ್ದಾರೆ.

“ನೀರವ್ ಮೋದಿ, ಲಲಿತ್ ಮೋದಿ ಅಥವಾ ನರೇಂದ್ರ ಮೋದಿಯೇ ಇರಲಿ, ಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಉಪನಾಮ ಏಕೆ ಇದೆ?" ಎಂಬ ರಾಹುಲ್‌ ಅವರ ಹೇಳಿಕೆಯನ್ನು ಪೂರ್ಣೇಶ್‌ ಮೋದಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಇದು ಮೋದಿ ಉಪನಾಮ ಇರುವವರನ್ನು ಅವಹೇಳನ ಮಾಡುತ್ತದೆ ಎಂಬುದು ಅವರ ದೂರಿನ ಸಾರವಾಗಿತ್ತು. ಸೂರತ್‌ನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಪರಿಣಾಮ ಅವರು ಲೋಕಸಭಾ ಸದಸ್ಯತ್ವದಿಂದ ತನ್ನಿಂತಾನೇ ಅನರ್ಹಗೊಂಡಿದ್ದರು. ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ರಾಹುಲ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಪೂರ್ಣೇಶ್‌ ಮೋದಿ ವಿರೋಧಿಸಿದ್ದಾರೆ.

ಪೂರ್ಣೇಶ್‌ ಅವರ ಪ್ರತಿಕ್ರಿಯೆಯ ಪ್ರಮುಖಾಂಶಗಳು

  • ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಹೆಚ್ಚುಕಡಿಮೆ ರ್‍ಯಾಲಿಯ ಮಾದರಿಯಲ್ಲಿ ರಾಹುಲ್‌ ತಮ್ಮ ಪಕ್ಷದ ಅನೇಕ ನಾಯಕರನ್ನು ಕರೆತಂದಿದ್ದರು. ಆ ಮೂಲಕ ಅವರು ನ್ಯಾಯಾಲಯದ ಮೇಲೆ ಒತ್ತಡ ಹೇರಿದ್ದು ಇದು ಬಾಲಿಶತನದಿಂದ ಕೂಡಿದ ಉದ್ದಟತನದ ಕೆಟ್ಟ ವರ್ತನೆಯಾಗಿದೆ.

  • ರಾಹುಲ್‌ ತಮ್ಮ ಆಪ್ತರು, ಸಹವರ್ತಿಗಳು, ಪಕ್ಷದ ನಾಯಕರು ಮತ್ತಿತರರ  ಮೂಲಕ ನ್ಯಾಯಾಲಯದ ವಿರುದ್ಧ ನ್ಯಾಯಸಮ್ಮತವಲ್ಲದ ಮತ್ತು ನ್ಯಾಯಾಂಗ ನಿಂದನೆಯಾಗುವಂತಹ ಹೇಳಿಕೆಗಳನ್ನು ಕೊಟ್ಟಿದ್ದಾರೆ.

  • ತೀರ್ಪು ಪ್ರಕಟವಾದಾಗ ಅವರ ಪಕ್ಷದ ಮುಖಂಡರು ನ್ಯಾಯಾಲಯದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಹಲವರು ನ್ಯಾಯಸಮ್ಮತವಲ್ಲದ ಹೇಳಿಕೆಗಳನ್ನು ನೀಡಿದ್ದಾರೆ.

  • ರಾಹುಲ್‌ ಅವರು 10ಕ್ಕೂ ಹೆಚ್ಚು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳನ್ನು ಎದುರಿಸುತ್ತಿದ್ದು ಅವರು ಅಪರಾಧದ ಚಾಳಿ ಹೊಂದಿದ್ದಾರೆ.

  • ವಾಕ್ ಸ್ವಾತಂತ್ರ್ಯ, ರಾಜಕೀಯ ಟೀಕೆ ಮತ್ತು ಭಿನ್ನಾಭಿಪ್ರಾಯದ ಹೆಸರಿನಲ್ಲಿ ಇತರರನ್ನು ಅವಮಾನಿಸುವ ಅಥವಾ ಇನ್ನೊಬ್ಬರ ಭಾವನೆಗಳಿಗೆ ಧಕ್ಕೆ ತರುವಂತಹ ಬೇಜವಾಬ್ದಾರಿ ಮತ್ತು ಮಾನನಷ್ಟ ಹೇಳಿಕೆಗಳನ್ನು ನೀಡುವ ಅಭ್ಯಾಸ ಆರೋಪಿಗೆ ಇದೆ.

ಪ್ರಕರಣದಲ್ಲಿ ವಿಧಿಸಿದ ಶಿಕ್ಷೆ ಪ್ರಶ್ನಿಸಿ ರಾಹುಲ್‌ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಾಳೆ (ಗುರುವಾರ) ಸೂರತ್‌ನ ಸೆಷನ್ಸ್‌ ನ್ಯಾಯಾಲಯದಲ್ಲಿ ನಡೆಯಲಿದೆ.

Kannada Bar & Bench
kannada.barandbench.com