ಎಂಎಲ್‌ಸಿ ಶಿವಣ್ಣರಿಂದ ಮಾನನಷ್ಟ ದಾವೆ: ಮಾಜಿ ಸಚಿವ ವಿಶ್ವನಾಥ್‌ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಸರ್ಕಾರದ ಯಾವುದೇ ಹುದ್ದೆಯಲ್ಲಿ ಇಲ್ಲದ, ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಸಿಎಂ ಪ್ರಮಾಣ ವಚನ ಸ್ವೀಕಾರದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ವಿಶ್ವನಾಥ್ ಹೇಳಿಕೆ ನೀಡಿದ್ದರು.
H Vishwanath
H Vishwanath
Published on: 

ವಿಧಾನ ಪರಿಷತ್ ಸದಸ್ಯ ಬಿ ಎಸ್ ಶಿವಣ್ಣ (ಮಳವಳ್ಳಿ ಶಿವಣ್ಣ) ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದುಪಡಿಸುವಂತೆ ಕೋರಿ ಮಾಜಿ ಸಚಿವ ಎಚ್ ವಿಶ್ವನಾಥ್ ಹಾಗೂ ಮಾಜಿ ಶಾಸಕ ಎ ಮಂಜುನಾಥ್ ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿ ಅನಂತ ರಮಾನಾಥ್ ಹೆಗಡೆ ಅವರ ಏಕಸದಸ್ಯ ಪೀಠದ ಮುಂದೆ ಗುರುವಾರ ಅರ್ಜಿಗಳು ವಿಚಾರಣೆಗೆ ಬಂದಿದ್ದವು. ಪ್ರತಿವಾದಿ ಬಿ ಎಸ್ ಶಿವಣ್ಣ ಪರ ವಕೀಲ ಶತಾಭಿಷ್ ಶಿವಣ್ಣ ವಾದ ಮಂಡಿಸಿದ್ದರು.

Justice Anant Ramanath Hegde
Justice Anant Ramanath Hegde

ಅರ್ಜಿದಾರ ಎಚ್ ವಿಶ್ವನಾಥ್ ಹಾಗೂ ಎ ಮಂಜುನಾಥ್ ಪರ ವಕೀಲರು ವಿಚಾರಣೆಗೆ ಗುರುವಾರ ಪುನಃ ಗೈರು ಹಾಜರಾಗಿದ್ದರು. ಪ್ರತಿವಾದಿ ಪರ ವಕೀಲರು ಪ್ರಕರಣದಲ್ಲಿ ವಾದ ಮಂಡಿಸಿಲು ಸಿದ್ಧರಿದ್ದು, ಅರ್ಜಿದಾರರ ಪರ ವಕೀಲರನ್ನು ತಮ್ಮ ವಾದ ಮಂಡಿಸುವಂತೆ ಕೋರಿಕೊಂಡಿದ್ದಾರೆ. ಆದರೆ, ಅರ್ಜಿದಾರರ ಪರ ವಕೀಲರು ಸತತ ಗೈರು ಹಾಜರಾಗಿದ್ದಾರೆ. ಮುಂದಿನ ವಿಚಾರಣೆ ವೇಳೆ ಹಾಜರಾಗದಿದ್ದರೆ ಅರ್ಜಿಯನ್ನು ವಜಾಗೊಳಿಸಲಾಗುವುದು ಎಂದು ಸೆಪ್ಟೆಂಬರ್‌ 25ರಂದು ಆದೇಶಿಸಿ ವಿಚಾರಣೆಯನ್ನು ಅಕ್ಟೋಬರ್‌ 1ಕ್ಕೆ ಮುಂದೂಡಲಾಗಿತ್ತು. ಆದರೆ, ಅರ್ಜಿದಾರರ ಪರ ವಕೀಲರು ಪುನಃ ಗೈರು ಹಾಜರಾಗಿದ್ದರಿಂದ ಅರ್ಜಿಗಳನ್ನು ವಜಾಗೊಳಿಸಿ ಪೀಠ ಆದೇಶಿಸಿತು.

ರಾಜ್ಯದಲ್ಲಿ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕಾರ ಮಾಡುವ ವೇದಿಕೆಯಲ್ಲಿ ಸಿದ್ದರಾಮಯ್ಯನವರ ಜೊತೆ ಬಿ ಎಸ್ ಶಿವಣ್ಣ ಇದ್ದರು. ಇದನ್ನು ಆಕ್ಷೇಪಿಸಿದ್ದ ಎಚ್ ವಿಶ್ವನಾಥ್, ಸರ್ಕಾರದ ಯಾವುದೇ ಹುದ್ದೆಯಲ್ಲಿ ಇಲ್ಲದ, ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಸಿಎಂ ಪ್ರಮಾಣ ವಚನ ಸ್ವೀಕಾರದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದರು. ಅಲ್ಲದೇ ಈ ವಿಚಾರವಾಗಿ ರಾಜ್ಯಪಾಲರಿಗೆ ಪತ್ರ ಸಹ ಬರೆದಿದ್ದರು. ಇದರ ವಿರುದ್ಧ ಶಿವಣ್ಣ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ಅದನ್ನು ವಿಚಾರಣೆಗೆ ಅಂಗೀಕರಿಸಲಾಗಿತ್ತು. ಆದ್ದರಿಂದ ಪ್ರಕರಣ ರದ್ದುಪಡಿಸುವಂತೆ ಕೋರಿ ವಿಶ್ವನಾಥ್ ಹಾಗೂ ಮಂಜುನಾಥ್ ಹೈಕೋರ್ಟ್ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com