ಮುತಾಲಿಕ್‌ರಿಂದ ಮಾನಹಾನಿ ಪ್ರಕರಣ: ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ವಿರುದ್ಧದ ವಾರೆಂಟ್‌ಗೆ ತಡೆ ನೀಡಿದ ಹೈಕೋರ್ಟ್‌

ಅರ್ಜಿದಾರರು ನೀಡಿರುವ ಹೇಳಿಕೆಯನ್ನು ಓದಿದರೆ, ಮೇಲ್ನೋಟಕ್ಕೆ ಇದು ಮಾನಹಾನಿಕರ ಎಂಬುದು ಸ್ಪಷ್ಟವಾಗುತ್ತದೆ. ಚುನಾವಣೆ ಸಮಯ ಎಂದೇಳಿ ಏನು ಬೇಕಾದರೂ ಮಾತನಾಡಬಹುದೇ? ಎಂದು ಗರಂ ಆದ ನ್ಯಾಯಮೂರ್ತಿಗಳು.
Pramod Muthalik and Karnataka HC
Pramod Muthalik and Karnataka HC
Published on

ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ ಪ್ರಕರಣ ಸಂಬಂಧ ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ ಸುನಿಲ್‌ ಕುಮಾರ್‌ ವಿರುದ್ಧ ವಿಚಾರಣಾಧೀನ ನ್ಯಾಯಾಲಯ ಜಾರಿ ಮಾಡಿರುವ ವಾರೆಂಟ್‌ಗೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ವಿಚಾರಣಾಧೀನ ನ್ಯಾಯಾಲಯ ಜಾರಿ ಮಾಡಿರುವ ವಾರೆಂಟ್‌ ಪ್ರಶ್ನಿಸಿ ವಿ ಸುನಿಲ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಸುನಿಲ್‌ ಕುಮಾರ್ ಅವರ ವಿರುದ್ಧದ ವಾರೆಂಟ್‌ಗೆ ತಡೆಯಾಜ್ಞೆ ನೀಡಲು ಮೊದಲಿಗೆ ನ್ಯಾಯಮೂರ್ತಿಗಳು ನಿರಾಕರಿಸಿದರು. ಆದರೆ, ಪಕ್ಷವು ವಿಪ್‌ ಜಾರಿ ಮಾಡಿದ್ದರಿಂದ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಸುನಿಲ್‌ ಕುಮಾರ್‌ ಪರ ವಕೀಲ ವಿನೋದ್‌ ಕುಮಾರ್‌ ಪೀಠದ ಗಮನಕ್ಕೆ ತಂದರು. ಅದನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ಸುನಿಲ್‌ ಕುಮಾರ್‌ ವಿರುದ್ಧದ ವಾರೆಂಟ್‌ಗೆ ತಡೆಯಾಜ್ಞೆ ನೀಡಿದರು.

ಇದಕ್ಕೂ ಮುನ್ನ ಸುನಿಲ್‌ ಕುಮಾರ್‌ ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್‌, ತೀವ್ರ ತರಾಟೆಗೆ ತೆಗೆದುಕೊಂಡಿತು.

ಅರ್ಜಿದಾರರ ಪರ ವಕೀಲ ವಿನೋದ್ ಕುಮಾರ್‌ ಅವರು ಚುನಾವಣೆ ಸಂದರ್ಭದಲ್ಲಿ ಅರ್ಜಿದಾರರು, ದೂರುದಾರಾದ ಪ್ರಮೋದ್‌ ಮುತಾಲಿಕ್‌ ವಿರುದ್ಧ ಹೇಳಿಕೆ ನೀಡಿದ್ದಾರೆ. ಪ್ರಮೋದ್ ಮುತಾಲಿಕ್‌ ನೀಡಿದ ಹೇಳಿಕೆಗೆ ಪ್ರತಿ ಹೇಳಿಕೆ ನೀಡಲಾಗಿದೆ. ಹೇಳಿಕೆ ಪ್ರತಿ ಹೇಳಿಕೆ ನೀಡಿದಾಗ ಮಾನನಷ್ಟ ಪ್ರಕರಣವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ ಎಂದು ಹೇಳಿದರು.

ಈ ವಾದ ಒಪ್ಪದ ಪೀಠ, ಅರ್ಜಿದಾರರು ನೀಡಿರುವ ಹೇಳಿಕೆಯನ್ನು ಓದಿದರೆ, ಮೇಲ್ನೋಟಕ್ಕೆ ಇದು ಮಾನಹಾನಿಕರ ಎಂಬುದು ಸ್ಪಷ್ಟವಾಗುತ್ತದೆ. ಚುನಾವಣೆ ಸಮಯ ಎಂದೇಳಿ ಏನು ಬೇಕಾದರೂ ಮಾತನಾಡಬಹುದೇ? ಅರ್ಜಿದಾರರು ನೀಡಿರುವ ಹೇಳಿಕೆಯನ್ನು ವಿಚಾರಣಾ ನ್ಯಾಯಾಲಯವು ಉಲ್ಲೇಖಿಸಿ, ಏಕೆ ಸಂಜ್ಞೇ ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ವಿವರಿಸಿದೆ. ಹೇಳಿಕೆ ನೀಡಿರುವುದಕ್ಕೆ ಒಂದು ಮಿತಿ ಇರಬೇಕು? ಟೈಗರ್‌ ಗ್ಯಾಂಗ್‌; ಗೋಕಾಕ್ ಏನು? ದೂರುದಾರರು ಆ ಟೈಗರ್‌ ಗ್ಯಾಂಗಿನ ಭಾಗವೇ? ಅರ್ಜಿದಾರರು ಹೇಗೆ ಆ ಹೇಳಿಕೆ ನೀಡಿದರು? ಚುನಾವಣೆ ಸಮಯ ಎಂದೇಳಿ ಇಷ್ಟಬಂದಂತೆ ಹೇಳಲಾಗದು" ಎಂದಿತು.

ಮುಂದುವರೆದು, "ಇದು ನಿಜಕ್ಕೂ  ಮಾನನಷ್ಟ ಪ್ರಕರಣವಾಗಿದೆ. ಮಾನಹಾನಿ ಹೇಳಿಕೆ ನೀಡುವುದು ಸಾರ್ವಜನಿಕ ಶಾಂತಿಭಂಗವನ್ನು ಉಂಟು ಮಾಡಲು ಕಾರಣವಾಗುತ್ತದೆ.. ಶಾಸಕರಾದವರು ಈ ರೀತಿ ಮಾತನಾಡಬಾರದು" ಎಂದು ತರಾಟೆಗೆ ತೆಗೆದುಕೊಂಡಿತು.

ಅರ್ಜಿದಾರರ ಪರ ವಕೀಲರು, ವಿಚಾರಣಾ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಿಲ್ಲ ಎಂದು ಅರ್ಜಿದಾರರ ವಿರುದ್ಧ ವಾರೆಂಟ್‌ ಜಾರಿ ಮಾಡಲಾಗಿದೆ. ಆದರೆ, ವಿಚಾರಣಾ ದಿನಾಂಕದಂದು ಪಕ್ಷದ ಕಾರ್ಯಕ್ರಮವೊಂದು ನಿಗದಿಯಾಗಿದ್ದು, ವಿಪ್‌ ಜಾರಿ ಮಾಡಲಾಗಿತ್ತು. ಅದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

ಅದನ್ನು ಪರಿಗಣಿಸಿದ ಪೀಠ, ಅರ್ಜಿದಾರರ ವಿರುದ್ಧದ ವಾರೆಂಟ್‌ಗೆ ತಡೆಯಾಜ್ಞೆ ನೀಡಿತು.

ಪ್ರಕರಣದ ಹಿನ್ನೆಲೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಕೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅರ್ಜಿದಾರ ಸುನಿಲ್‌ ಕುಮಾರ್‌ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಪ್ರಮೋದ್‌ ಮುತಾಲಿಕ್‌ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸುನಿಲ್‌ ಕುಮಾರ್‌ ಗೆಲುವು ಸಾಧಿಸಿದ್ದರು. ಚುನಾವಣಾ ಫಲಿತಾಂಶದ ನಂತರ 2023ರ ಮೇ 14ರಂದು ರ್ಕಾಕಳ ಬಂಡಿಮಠ ಬಸ್‌ ನಿಲ್ದಾಣ ಬಳಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಸುನೀಲ್‌ ಕುಮಾರ್‌, ‘ಪ್ರಮೋದ್ ಮುತಾಲಿಕರೇ ಹಣಕ್ಕೋಸ್ಕರ ಉತ್ತರ ಕರ್ನಾಟಕದಲ್ಲಿ ಹಿಂದೂಗಳ ಹತ್ಯೆಯನ್ನು ಟೈಗರ್‌ ಗ್ಯಾಂಗಿನ ನೆಪದಲ್ಲಿ ಎಷ್ಟು ಬಾರಿ ಮಾಡಿಸಿದಿರ ನೀವು. ಆ ಹತ್ಯೆಯನ್ನು ಮಾಡಿದಂತಹವರು ಇವತ್ತಿಗೂ ಸಹ ಕಲಬುರಗಿ ಜೈಲಿನಲ್ಲಿ ಇದ್ದಾರೆ’ ಎಂದು ಹೇಳಿಕೆ ನೀಡಿದ್ದರು.

ಇದರಿಂದ ಸುನೀಲ್‌ ಕುಮಾರ್‌ ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದ ಪ್ರಮೋದ್‌ ಮುತಾಲಿಕ್‌ 2023ರ ಸೆಪ್ಟೆಂಬರ್‌ 7ರಂದು ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

Kannada Bar & Bench
kannada.barandbench.com