ಮಾನನಷ್ಟ ದಾವೆ: ಮಾಜಿ ಶಾಸಕ ಕೃಷ್ಣಾರೆಡ್ಡಿಗೆ ಸಮನ್ಸ್‌ ಜಾರಿ ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

ಕತ್ರಿಗುಪ್ಪೆಯ ಸರ್ವೇ ನಂ.125 ಮತ್ತು 126ಕ್ಕೆ ಸೇರಿದ ಅಂದಾಜು ₹ 350 ಕೋಟಿ ಮೌಲ್ಯದ 4.31 ಎಕರೆ ಬಿ.ಖರಾಬು ಜಮೀನಿಗೆ 41 ಮಂದಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸುವ ಯತ್ನ ನಡೆಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
JDS Leader M Krishna reddy and BJP Leader N R Ramesh
JDS Leader M Krishna reddy and BJP Leader N R RameshFB

ಬಿಜೆಪಿ ಮುಖಂಡ ಎನ್‌ ಆರ್‌ ರಮೇಶ್‌ ಅವರು ಹೂಡಿರುವ ಮಾನನಷ್ಟ ದಾವೆಗೆ ಸಂಬಂಧಿಸಿದಂತೆ ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷ ಹಾಗೂ ಚಿಂತಾಮಣಿ ಕ್ಷೇತ್ರದ ಮಾಜಿ ಜೆಡಿಎಸ್‌ ಶಾಸಕ ಎಂ ಕೃಷ್ಣಾರೆಡ್ಡಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರ ಸಮನ್ಸ್‌ ಜಾರಿ ಮಾಡಿದೆ.

ರಮೇಶ್‌ ದಾಖಲಿಸಿದ್ದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ (ಮ್ಯಾಜಿಸ್ಟ್ರೇಟ್‌) ನ್ಯಾಯಾಲಯದ ನ್ಯಾಯಾಧೀಶೆ ಜೆ ಪ್ರೀತ್‌ ವಿಚಾರಣೆ ನಡೆಸಿದರು.

Preeth. J.

XLII Addl. Chief Metropolitan Magistrate
Preeth. J. XLII Addl. Chief Metropolitan Magistrate

ಆರೋಪಿ ಕೃಷ್ಣಾರೆಡ್ಡಿ ಅವರಿಗೆ ಈ ಹಿಂದಿನ ವಿಚಾರಣೆ ವೇಳೆಯೇ ಸಮನ್ಸ್‌ ಜಾರಿಗೊಳಿಸಲಾಗಿತ್ತು. ಆದರೆ, ಅವರು ಮಂಗಳವಾರ ಗೈರಾಗಿದ್ದರು. ಸಮನ್ಸ್‌ ಇನ್ನೂ ಜಾರಿಯಾಗದ ಕಾರಣ ಪುನಃ ಸಮನ್ಸ್‌ ಜಾರಿಗೆ ಆದೇಶಿಸಿದ ನ್ಯಾಯಾಧೀಶರು ವಿಚಾರಣೆ ಮುಂದೂಡಿದರು.

ಪ್ರಕರಣದ ಹಿನ್ನೆಲೆ: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗಣೇಶ‌ ಮಂದಿರ ವಾರ್ಡ್ ವ್ಯಾಪ್ತಿಯ ಬನಗಿರಿ ನಗರ ವ್ಯಾಪ್ತಿಗೆ ಒಳಪಡುವ ಕತ್ರಿಗುಪ್ಪೆಯ ಸರ್ವೇ ನಂ.125 ಮತ್ತು 126ಕ್ಕೆ ಸೇರಿದ ಅಂದಾಜು ₹ 350 ಕೋಟಿ ಮೌಲ್ಯದ 4.31 ಎಕರೆ ಬಿ.ಖರಾಬು ಜಮೀನಿಗೆ 41 ಮಂದಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸುವ ಯತ್ನ ನಡೆಸಿದ್ದಾರೆ ಎಂದು ರಮೇಶ್‌ ಆರೋಪಿಸಿದ್ದರು. ಈ ಸಂಬಂಧ ಲೋಕಾಯುಕ್ತ ಮತ್ತು ಬೆಂಗಳೂರು ಮಹಾನಗರ ಕಾರ್ಯಪಡೆಯಲ್ಲಿ (ಬಿಎಂಟಿಎಫ್) ದೂರು ಸಲ್ಲಿಸಿದ್ದರು.

ಈ ದೂರು ಆಧರಿಸಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಆಗ ವಿಧಾನಸಭಾ ಅರ್ಜಿಗಳ ಸಮಿತಿಯ ಅಧ್ಯಕ್ಷರೂ ಆಗಿದ್ದ ಕೃಷ್ಣಾರೆಡ್ಡಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಆದೇಶಿಸುವ ಬದಲಾಗಿ, ಪಾಲಿಕೆಯ ಸ್ವತ್ತನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದ ಅಧಿಕಾರಿಯ ವಿರುದ್ಧವೇ ನಿರ್ಣಯ ತೆಗೆದುಕೊಂಡಿದ್ದರು ಎಂದು ಆರೋಪದಲ್ಲಿ ವಿವರಿಸಲಾಗಿತ್ತು. ಈ ಸಂಬಂಧ ರಮೇಶ್‌ ಮಾಧ್ಯಮಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದರು.

ಇದಕ್ಕೆ ವಿರುದ್ಧವಾಗಿ ಕೃಷ್ಣಾರೆಡ್ಡಿ ಹೇಳಿಕೆ ನೀಡಿದ್ದರು.  ಕೃಷ್ಣಾರೆಡ್ಡಿ ನನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಮತ್ತು ಮಾನನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ರಮೇಶ್ ಅವರು ಕೃಷ್ಣಾರೆಡ್ಡಿ ವಿರುದ್ಧ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ಸಂಜ್ಞೇ ಪರಿಗಣಿಸಿರುವ ನ್ಯಾಯಾಲಯವು ಕೃಷ್ಣಾರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಲು ಚಿಂತಾಮಣಿ ಪೊಲೀಸರಿಗೆ ಆದೇಶಿಸಿದೆ.

Related Stories

No stories found.
Kannada Bar & Bench
kannada.barandbench.com