ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಎಸ್. ಪಾಟೀಲ್ ದಾಖಲಿಸಿದ್ದ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ವಿಚಾರಣಾಧೀನ ನ್ಯಾಯಾಲಯ ಜಾರಿ ಮಾಡಿದ್ದ ಶೋಕಾಸ್ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾರಿಗೊಳಿಸಿದ್ದ ಶೋಕಾಸ್ ನೋಟಿಸ್ ರದ್ದುಪಡಿಸುವಂತೆ ಕೋರಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಖಾಸಗಿ ದೂರುದಾರರು ಹಾಗೂ ಪ್ರತಿವಾದಿಯಾದ ಸಚಿವ ಶಿವಾನಂದ ಎಸ್.ಪಾಟೀಲ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ಅವರು “ಮಾನನಷ್ಟ ಮೊಕ್ಕದ್ದಮೆ ಆರೋಪ ಸಂಬಂಧ ಸಚಿವ ಶಿವಾನಂದ ಪಾಟೀಲ್ ಅವರು ಅರ್ಜಿದಾರರ ವಿರುದ್ಧ ವಿಚಾರಣಾಧೀನ ನ್ಯಾಯಾಲಯದ ಮುಂದೆ ಖಾಸಗಿ ದೂರು ದಾಖಲಿಸಿದ್ದರು. ಅದನ್ನು ಪರಿಗಣಿಸಿ, ನ್ಯಾಯಾಲಯವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) 356 ಅಡಿಯಲ್ಲಿ ನೋಟಿಸ್ ಶೋಕಾಸ್ ನೋಟಿಸ್ ನೀಡಿದೆ. ಆದರೆ, ಬಿಎನ್‌ಎಸ್‌ಎಸ್ ಸೆಕ್ಷನ್ 223(1) ದೂರದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಂಡು ಸಂಜ್ಞೇ ಪರಿಗಣಿಸಿದ ನಂತರವೇ ಆರೋಪಿಗೆ ಶೋಕಾಸ್ ನೋಟಿಸ್ ನೀಡಬೇಕಾಗುತ್ತದೆ. ಈ ಪ್ರಕರಣದಲ್ಲಿ ದೂರುದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಳ್ಳದೇ ಅರ್ಜಿದಾರರಿಗೆ ನೇರವಾಗಿ ಶೋಕಸ್ ನೋಟಿಸ್ ಜಾರಿಗೊಳಿಸಿದೆ. ಇದು ಕಾನೂನು ಪ್ರಕ್ರಿಯೆ ಲೋಪವಾಗಿದೆ ಎಂದು ಪೀಠದ ಗಮನಕ್ಕೆ ತಂದರು.
ಅದನ್ನು ಪರಿಗಣಿಸಿದ ಪೀಠವು ಅರ್ಜಿ ಕುರಿತ ಮುಂದಿನ ವಿಚಾರಣೆವರೆಗೆ ಯತ್ನಾಳ್ ಅವರ ವಿರುದ್ಧದ ಶೋಕಾಸ್ ನೋಟಿಸ್ ಮತ್ತು ವಿಚಾರಣಾಧೀನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿತು.
ಚುನಾವಣಾ ಸಮಾವೇಶದಲ್ಲಿ ಯತ್ನಾಳ್ ಅವರು ಶಿವಾನಂದ ಪಾಟೀಲ್ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದರು. ಇದರಿಂದ ಶಿವಾನಂದ ಪಾಟೀಲ್ ಅವರು ವಿಚಾರಣಾಧೀನ ನ್ಯಾಯಾಲಯದಲ್ಲಿ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅದನ್ನು ವಿಚಾರಣೆಗೆ ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಯತ್ನಾಳ್‌ಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ 2024ರ ಜುಲೈ 16ರಂದು ಆದೇಶಿಸಿತ್ತು.