
ಮಾನನಷ್ಟ ಆರೋಪ ಪ್ರಕರಣದಲ್ಲಿ ಬಿಜೆಪಿ ಶಾಸಕ ವಿ ಸುನೀಲ್ ಕುಮಾರ್ ಅವರನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಪರಾಧ ಮುಕ್ತಗೊಳಿಸಿ ಆದೇಶಿಸಿದೆ.
ಸುನೀಲ್ ಕುಮಾರ್ ವಿರುದ್ಧ “ಶ್ರೀರಾಮ ಸೇನೆ” ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವಿಶೇಷ ಮ್ಯಾಜಿಸ್ಟ್ರೇಟ್ ಕೆ ಎನ್ ಶಿವಕುಮಾರ್ ನಡೆಸಿದರು. ಸುನಿಲ್ ಕುಮಾರ್ ಪರ ಹೈಕೋರ್ಟ್ ವಕೀಲ ಬಿ ವಿನೋದ್ ಕುಮಾರ್ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ 2023ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ವಿ ಸುನೀಲ್ ಕುಮಾರ್ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಅಂದು ತಮ್ಮ ಗೆಲುವಿನ ವಿಜಯೋತ್ಸವ ಆಚರಿಸುವಾಗ ಸುನೀಲ್ ಕುಮಾರ್ ಭಾಷಣ ಮಾಡಿದ್ದರು. ಈ ಭಾಷಣದಲ್ಲಿ “ನನ್ನ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್. ಹಣ ಪಡೆದು ಸ್ಪರ್ಧೆ ಮಾಡುತ್ತಾರೆ ಎಂಬ ಹೇಳಿಕೆ ನೀಡಿದ್ದಾರೆ” ಎಂದು ಆರೋಪಿಸಿ ಪ್ರಮೋದ್ ಮುತಾಲಿಕ್ ಖಾಸಗಿ ದೂರು ಸಲ್ಲಿಸಿ, ಮಾನಹಾನಿ ಮೊಕದ್ದಮೆ ಹೂಡಿದ್ದರು.