ಚನ್ನಣ್ಣನವರ್ ವಿರುದ್ಧ ಹೇಳಿಕೆ ಪ್ರಕಟಿಸದಂತೆ ವಕೀಲ ಜಗದೀಶ್ ಮತ್ತಿತರರಿಗೆ ತಡೆಯಾಜ್ಞೆ ನೀಡಿದ್ದ ನ್ಯಾಯಾಲಯ

“ಪ್ರತಿವಾದಿಗಳು ಯಾವುದೇ ಆಧಾರವಿಲ್ಲದೆ ಇವರ ವಿರುದ್ಧ ಮಾನಹಾನಿಕರ ವಿಚಾರಗಳನ್ನು ಪ್ರಕಟಿಸುತ್ತಿದ್ದರು ಮತ್ತು ಪ್ರಸಾರ ಮಾಡುತ್ತಿದ್ದರು. ಇದು ಮುಂದುವರೆದರೆ ಅವರ ಘನತೆಗೆ ಧಕ್ಕೆಯಾಗುತ್ತದೆ” ಎಂದು ವಕೀಲ ಸುಧನ್ವ ವಾದಿಸಿದ್ದರು.
IPS officer Ravi D Channannanavar and advocate Jagadish Kumar K N 

IPS officer Ravi D Channannanavar and advocate Jagadish Kumar K N 

ಐಪಿಎಸ್‌ ಅಧಿಕಾರಿ ರವಿ ಡಿ ಚನ್ನಣ್ಣನವರ್‌ ಅವರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ವಕೀಲ ಜಗದೀಶ್‌ ಕುಮಾರ್‌ ಕೆ ಎನ್‌ ಮತ್ತಿತರರು ಪ್ರಕರಣ ಇತ್ಯರ್ಥವಾಗುವವರಗೆ ನೀಡಬಾರದು ಎಂದು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಇತ್ತೀಚೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ತಮ್ಮ ಕಕ್ಷೀದಾರ ರವಿ ಚನ್ನಣ್ಣನವರ್‌ ಅವರ ಘನತೆ, ಗೌರವಗಳಿಗೆ ಧಕ್ಕೆ ನೀಡುವಂತಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಜಗದೀಶ್‌ ಸಹಿತ ವಿವಿಧ ಪ್ರತಿವಾದಿಗಳು ರೂ 3 ಕೋಟಿ ಪರಿಹಾರ ನೀಡುವಂತೆ ಕೋರಿ ವಕೀಲ ಸುಧನ್ವ ಡಿ ಎಸ್‌ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

ಚನ್ನಣ್ಣನವರ್‌ ವಿರುದ್ಧ ಜಗದೀಶ್‌ ಕುಮಾರ್‌ ಕೆ ಎನ್‌ (ಜಗದೀಶ್‌ ಕೆ ಎನ್‌ ಮಹಾದೇವ್‌) ಅವರು ನೀಡಿದ್ದ ಹೇಳಿಕೆಗಳ ಲಿಂಕ್‌ ಅನ್ನು ಮುಂದಿನ ಆದೇಶದವರೆಗೆ ತೆಗೆದು ಹಾಕುವಂತೆಯೂ ಪ್ರತಿವಾದಿಗಳಾದ ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ಗಳಿಗೆ ನ್ಯಾಯಾಲಯ ಜನವರಿ 31ರಂದು ನೀಡಿದ್ದ ಆದೇಶದಲ್ಲಿ ಸೂಚಿಸಿದೆ.

Also Read
ನ್ಯಾಯಾಲಯ ಆವರಣದಲ್ಲಿ ಗಲಾಟೆ ಪ್ರಕರಣ: ವಕೀಲ ಜಗದೀಶ್ ಪೊಲೀಸ್ ವಶಕ್ಕೆ

“ಚನ್ನಣ್ಣನವರ್‌ ಚಿಕ್ಕವಯಸ್ಸಿನಲ್ಲೇ ಐಪಿಎಸ್‌ ಅಧಿಕಾರಿಯಾಗಿದ್ದು ಸಮಾಜದಲ್ಲಿ ಖ್ಯಾತಿ ಪಡೆದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳಿಗೆ ಮಾದರಿಯಾಗಿದ್ದಾರೆ. ಅವರು ಲೇಖಕರೂ ಆಗಿದ್ದು ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. ಪ್ರಸ್ತುತ ಸಿಐಡಿಯ ಎಸ್‌ಪಿಯಾಗಿ ಚನ್ನಣ್ಣನವರ್‌ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿವಾದಿಗಳು ಯಾವುದೇ ಆಧಾರವಿಲ್ಲದೆ ಇವರ ವಿರುದ್ಧ ಮಾನಹಾನಿಕರ ವಿಚಾರಗಳನ್ನು ಪ್ರಕಟಿಸುತ್ತಿದ್ದರು ಮತ್ತು ಪ್ರಸಾರ ಮಾಡುತ್ತಿದ್ದರು. ಇದು ಮುಂದುವರೆದರೆ ಅವರ ಘನತೆಗೆ ಧಕ್ಕೆಯಾಗುತ್ತದೆ” ಎಂದು ವಕೀಲ ಸುಧನ್ವ ವಾದಿಸಿದ್ದರು.

ಪ್ರಕರಣದಲ್ಲಿ ಜಗದೀಶ್‌, ಫೇಸ್‌ಬುಕ್‌, ಯೂಟ್ಯೂಬ್‌ ಮಾತ್ರವಲ್ಲದೆ ವಿಜಯ ಟಿವಿ, ಪ್ರತಿಕ್ಷಣ ನ್ಯೂಸ್‌, ಸುದ್ದಿ ಮನೆ, ಸ್ಪೀಡ್‌ ನ್ಯೂಸ್‌, ಕನ್ನಡ ಫ್ಲಾಶ್‌ ನ್ಯೂಸ್‌ಗಳನ್ನು ಕೂಡ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

Related Stories

No stories found.
Kannada Bar & Bench
kannada.barandbench.com