ಸಚಿವೆ ಲಕ್ಷ್ಮಿ ವಿರುದ್ಧ ಅವಾಚ್ಯ ಶಬ್ದ ಬಳಕೆ: ಶಾಸಕ ರವಿ ವಿರುದ್ಧ ಆತುರದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ನಿರ್ದೇಶನ

“ಲಕ್ಷ್ಮಿ ಅವರ ವಿರುದ್ಧ ರವಿ ಅವಾಚ್ಯ ಶಬ್ದ ಬಳಕೆ ಮಾಡಿರುವುದು ನಮ್ಮ ಸಿಸಿಟಿವಿ ತುಣುಕಿನಲ್ಲಿದೆ. ಎಫ್‌ಎಸ್‌ಎಲ್‌ ವರದಿಗಾಗಿ ಕಾಯುತ್ತಿದ್ದು, ಸಭಾಧ್ಯಕ್ಷರು ಪೀಠದಲ್ಲಿ ಇರದಿದ್ದರಿಂದ ತನಿಖೆ ನಡೆಸುವ ವ್ಯಾಪ್ತಿ ಅವರಿಗಿಲ್ಲ” ಎಂದ ಎಸ್‌ಪಿಪಿ.
MLC C T Ravi, minister Lakshmi Hebbalkar & Karnataka HC
MLC C T Ravi, minister Lakshmi Hebbalkar & Karnataka HC
Published on

ವಿಧಾನ ಪರಿಷತ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಸಿ ಟಿ ರವಿ ವಿರುದ್ಧ ಆತುರದ ಕ್ರಮಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ಮಾಡಿದೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಪರಿಷತ್‌ ಕಲಾಪದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಬೆಳಗಾವಿಯ ಬಾಗೇವಾಡಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದತಿ ಕೋರಿ ಸಿ ಟಿ ರವಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

“ಪ್ರಕರಣದಲ್ಲಿ ವಿಚಾರಣಾ ವ್ಯಾಪ್ತಿಯ ವಿಚಾರವಿದ್ದು, ಸಭಾಧ್ಯಕ್ಷರು ಪ್ರಕ್ರಿಯೆ ಮುಕ್ತಾಯಗೊಳಿಸಬಹುದೇ ಅಥವಾ ತನಿಖಾ ಸಂಸ್ಥೆಯು ತನಿಖೆ ನಡೆಸಬೇಕೆ ಎಂಬ ವಿಚಾರಕ್ಕೆ ಉತ್ತರಕಂಡುಕೊಳ್ಳಬೇಕಿದೆ. ಹೀಗಾಗಿ, ಅರ್ಜಿಯನ್ನು ಜನವರಿ 30ಕ್ಕೆ ನಿಗದಿಗೊಳಿಸಲಾಗಿದೆ. ಅಲ್ಲಿಯವರೆಗೆ ರಾಜ್ಯ ಸರ್ಕಾರವು ಅರ್ಜಿದಾರರ ವಿರುದ್ಧ ಆತುರದ ನಿರ್ಧಾರ ಕೈಗೊಳ್ಳಬಾರದು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

ರವಿ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ವಿಧಾನ ಪರಿಷತ್‌ನಲ್ಲಿ ರವಿ ನೀಡಿರುವ ಹೇಳಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ರವಿ ಹೇಳಿಕೆ ಆಧರಿಸಿ 19-12-24 ರಂದು ದೂರು ದಾಖಲಿಸಲಾಗಿದೆ. ಈ ದೂರು ದಾಖಲಾಗುವುದಕ್ಕೂ ಮುನ್ನವೇ ಪರಿಷತ್‌ ಸಭಾಧ್ಯಕ್ಷರು ಪ್ರಕರಣ ಇತ್ಯರ್ಥಪಡಿಸಿದ್ದಾರೆ. ಸೀತಾ ಸೊರೇನ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ಪೀಠವು ನೀಡಿರುವ ತೀರ್ಪು ನಮ್ಮ ಮುಂದಿದೆ. ಸದನದಲ್ಲಿ ಶಾಸಕರ ನಡುವಿನ ವಾಗ್ವಾದವು ವಿಶೇಷ ಹಕ್ಕಾಗಿದ್ದು, ಇದಕ್ಕೆ ವಿನಾಯಿತಿ ಇರುತ್ತದೆ” ಎಂದಿರುವುದನ್ನು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಈ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ-1 ಬಿ ಎ ಬೆಳ್ಳಿಯಪ್ಪ ಅವರು “ಸದನದೊಳಗೆ ನಡೆಯುವ ಎಲ್ಲಾ ಕ್ರಿಮಿನಲ್‌ ಚಟುವಟಿಕೆಗಳಿಗೆ ವಿನಾಯಿತಿ ಇರುವುದಿಲ್ಲ. ಅಪರಾಧ ಪ್ರಕರಣವನ್ನು ತನಿಖೆ ನಡೆಸಬೇಕಾಗುತ್ತದೆ” ಎಂದು ವಾದಿಸಿರುವುದನ್ನೂ ಆದೇಶದಲ್ಲಿ ಅಡಕಗೊಳಿಸಲಾಗಿದೆ.

ಇದಕ್ಕೂ ಮುನ್ನ, ಸಿ ವಿ ನಾಗೇಶ್‌ ಅವರು “ಶಾಸಕಾಂಗದ ವ್ಯಾಪ್ತಿಗೆ ಕಾರ್ಯಾಂಗ ಕಾಲಿರಿಸಬಹುದೇ ಎಂಬುದನ್ನು ನ್ಯಾಯಾಲಯವು ಪರಿಗಣಿಸಬೇಕಿದೆ” ಎಂದರು.

ಆಗ ಪೀಠವು “ಘಟನೆಯು ಸದನದ ಒಳಗೆ ನಡೆದಿತ್ತೇ?” ಎಂದು ಪ್ರಶ್ನಿಸಿತು. ಇದಕ್ಕೆ ನಾಗೇಶ್‌ ಅವರು “ಹೌದು” ಎಂದರು.

ಆನಂತರ ಬೆಳ್ಳಿಯಪ್ಪ ಅವರನ್ನು ಕುರಿತು ಪೀಠವು “ವಿಧಾನ ಪರಿಷತ್‌ ಸಭಾಧ್ಯಕ್ಷರು ಇದು ಸದನಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಸಿಐಡಿ ತನಿಖೆ ನೀಡಿರುವುದು ಕಾನೂನಿಗೆ ವಿರುದ್ಧ ಎಂದು ಹೇಳಿದ್ದಾರೆ” ಎಂದರು.

ಅದಕ್ಕೆ ಬೆಳ್ಳಿಯಪ್ಪ ಅವರು “ಘಟನೆ ನಡೆದಾಗ ಸದನ ಮುಂದೂಡಲಾಗಿತ್ತು” ಎಂದು ಪ್ರಯಿಕ್ರಿಯಿಸಿದರು.

ಈ ವೇಳೆ ಪೀಠವು ನಾಗೇಶ್‌ ಅವರನ್ನು ಕುರಿತು “ಸದನದ ಒಳಗೆ ಸದಸ್ಯರು ಏನೇ ಮಾತನಾಡಿದರೂ ಅವರಿಗೆ ವಿನಾಯಿತಿ ಇರುತ್ತದೆ ಎಂಬುದು ನಿಮ್ಮ ಸಲಹೆಯಾಗಿದೆ. ಸದನ ನಡೆಯುತ್ತಿತ್ತೇ, ಇಲ್ಲವೇ?” ಎಂದಿತು. ಅದಕ್ಕೆ ನಾಗೇಶ್‌ ಅವರು “ಸದನದ ಒಳಗೆ ಏನೇ ಮಾತನಾಡಿದರೂ ವಿನಾಯಿತಿ ಅನ್ವಯಿಸಲಿದೆ” ಎಂದರು.

ಮುಂದುವರಿದು, “ಲಕ್ಷ್ಮಿ ಹೆಬ್ಬಾಳ್ಕರ್‌ ಅವರನ್ನು ರವಿ ನಿಂದಿಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸಭಾಧ್ಯಕ್ಷರು ಏನೂ ನಡೆದಿಲ್ಲ ಎಂದು ರೂಲಿಂಗ್‌ ನೀಡಿದ್ದಾರೆ. ಇಡೀ ಪ್ರತಿಪಕ್ಷ ಪ್ರತಿಭಟನೆ ನಡೆಸುತ್ತಿದ್ದು, ರವಿಗೆ ರಕ್ಷಣೆ ಬೇಕಿದೆ. ವಿಡಿಯೊದಲ್ಲಿ ರವಿ ಬಳಕೆ ಮಾಡಿದ್ದಾರೆ ಎನ್ನುವ ಪದವಿಲ್ಲ. ಸಭಾಧ್ಯಕ್ಷರು ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ” ಎಂದರು.

ಆಗ ಬೆಳ್ಳಿಯಪ್ಪ ಅವರು “ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದರಿಂದ ಅಂದು ಮಧ್ಯಾಹ್ನ ಒಂದು ಗಂಟೆ ವೇಳೆಗೆ ಸದನವನ್ನು ಮುಂದೂಡಲಾಗಿತ್ತು. ಆ ಸಂದರ್ಭದಲ್ಲಿ ಸಭಾಧ್ಯಕ್ಷರು ಪೀಠದಲ್ಲಿ ಇರಲಿಲ್ಲ. ನಮ್ಮಲ್ಲಿರುವ ಸಿಸಿಟಿವಿ ತುಣುಕಿನಲ್ಲಿ ರವಿ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಎಫ್‌ಎಸ್‌ಎಲ್‌ ವರದಿಗಾಗಿ ಕಾಯುತ್ತಿದ್ದೇವೆ. ಸಭಾಧ್ಯಕ್ಷರು ಪೀಠದಲ್ಲಿ ಇರದಿದ್ದರಿಂದ ತನಿಖೆ ನಡೆಸುವ ವ್ಯಾಪ್ತಿ ಅವರಿಗೆ ಇಲ್ಲ” ಎಂದರು.

Also Read
ಸಚಿವೆ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದ ಬಳಕೆ ಪ್ರಕರಣ: ಶಾಸಕ ಸಿ ಟಿ ರವಿ ತಕ್ಷಣ ಬಿಡುಗಡೆಗೆ ಆದೇಶಿಸಿದ ಹೈಕೋರ್ಟ್‌

ಇದಕ್ಕೆ ಪೀಠವು “ಸಭಾಧ್ಯಕ್ಷರು ಪೀಠದಲ್ಲಿದ್ದಾಗ ಮಾತ್ರ ಏನದರೂ ಘಟನೆಯಾದರೆ ತನಿಖೆ ನಡೆಸಬಹುದೇ?” ಎಂದಿತು. ಇದಕ್ಕೆ ಬೆಳ್ಳಿಯಪ್ಪ ಅವರು “ಸದನ ಮುಂದೂಡಲಾಗಿತ್ತು ಮಹಾಸ್ವಾಮಿ. ವಿಸ್ತೃತವಾಗಿ ಪ್ರಕರಣದ ವಿಚಾರಣೆ ನಡೆಸಬೇಕಿದೆ. ಪ್ರಕರಣವು ಬಿಎನ್‌ಎಸ್‌ ಸೆಕ್ಷನ್‌ 79 (ಮಹಿಳೆಯ ಘನತೆಗೆ ಚ್ಯುತಿ ತರುವುದಾಗಿದ್ದು, ಇದಕ್ಕೆ ಮೂರು ವರ್ಷ ದಂಡ ಸಹಿತ ಶಿಕ್ಷೆ ವಿಧಿಸಬಹುದಾಗಿದೆ) ವ್ಯಾಪ್ತಿಗೆ ಬರುತ್ತದೆ. ಹೀಗಾಗಿ, ಕ್ರಿಮಿನಲ್‌ ಕೃತ್ಯವು ಸಂಸದೀಯ ವಿನಾಯಿತಿ ವ್ಯಾಪ್ತಿಗೆ ಬರುತ್ತದೆ ಎನ್ನಲಾಗದು. ರವಿ ಧ್ವನಿ ಮಾದರಿ ನೀಡಲು ನಿರಾಕರಿಸಿದ್ದಾರೆ. ತನಿಖೆಗೆ ಸಹಕರಿಸುತ್ತಿಲ್ಲ” ಎಂದರು.

ಆಗ ನಾಗೇಶ್‌ ಅವರು “ದಿನಂಪ್ರತಿ ಇಂಥ ಘಟನೆಗಳು ನಡೆಯುತ್ತಿದ್ದು, ಅಧಿಕಾರಯುತ ಆದೇಶದ ಮೂಲಕ ಪೀಠವು ಪ್ರಕರಣ ನಿರ್ಧರಿಸಬೇಕು” ಎಂದರು. ಇದಕ್ಕೆ ಪೀಠವು “ಪ್ರಕರಣದ ವ್ಯಾಪ್ತಿಯನ್ನು ನಿರ್ಧರಿಸಬೇಕಿದೆ” ಎಂದು ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com