'ಕರಾವಳಿ ಅಲೆ' ಸಂಪಾದಕರ ಅವಹೇಳನ: ಆರೋಪಿಗಳಿಗೆ ವಿಧಿಸಲಾಗಿದ್ದ ಶಿಕ್ಷೆ ಎತ್ತಿಹಿಡಿದ ಮಂಗಳೂರು ನ್ಯಾಯಾಲಯ

ತಾವು ನೀಡಿದ ಹೇಳಿಕೆಗಳನ್ನು ಸ್ವಲ್ಪ ಮಟ್ಟಿಗೆ ಕೂಡ ಸಮರ್ಥಿಸಲು ಆರೋಪಿಗಳಿಗೆ ಸಾಧ್ಯವಾಗಿಲ್ಲ ಎಂದು ಹೇಳಿದೆ ನ್ಯಾಯಾಲಯ.
'ಕರಾವಳಿ ಅಲೆ' ಸಂಪಾದಕರ ಅವಹೇಳನ: ಆರೋಪಿಗಳಿಗೆ ವಿಧಿಸಲಾಗಿದ್ದ ಶಿಕ್ಷೆ ಎತ್ತಿಹಿಡಿದ ಮಂಗಳೂರು ನ್ಯಾಯಾಲಯ
A1
Published on

ʼಕರಾವಳಿ ಅಲೆʼ ದೈನಿಕದ ಸಂಪಾದಕ ಬಿ ವಿ ಸೀತಾರಾಮ್‌ ಅವರನ್ನು ನಿಂದಿಸಿ ತಮ್ಮ ಪತ್ರಿಕೆಯಲ್ಲಿ ಲೇಖನ ಬರೆದಿದ್ದ ʼಕರಾವಳಿ ಮಾರುತʼ ಸಂಪಾದಕ  ಮತ್ತು ಅದರ ಮಾಲೀಕರಿಗೆ ಜೈಲು ಶಿಕ್ಷೆ ವಿಧಿಸಿದ್ದ ಕೆಳ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.

ಆ ಮೂಲಕ  ಮೇಲ್ಮನವಿದಾರರಾದ ಕರಾವಳಿ ಮಾರುತ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕ ಸುದೇಶ್‌ ಕುಮಾರ್‌ ಮತ್ತು ಪತ್ರಿಕೆಯ ಮಾಲೀಕ ಗಂಗಾಧರ್‌ ಪಿಲಿಯೂರು ಅವರಿಗೆ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕೆಯನ್ನು ನ್ಯಾಯಾಧೀಶ ಹೆಚ್‌ ಎಸ್‌ ಮಲ್ಲಿಕಾರ್ಜುನ ಸ್ವಾಮಿ ಎತ್ತಿ ಹಿಡಿದಿದ್ದಾರೆ.

ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಕರಾವಳಿ ಪತ್ರಿಕೆ ಸಂಪಾದಕರಾದ ಬಿ ವಿ ಸೀತಾರಾಮ್‌ ಅವರ ವಿರುದ್ಧ ಆರೋಪಿಗಳು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ತಾವು ನೀಡಿದ ಹೇಳಿಕೆಗಳನ್ನು ಸ್ವಲ್ಪ ಮಟ್ಟಿಗೆ ಕೂಡ ಸಮರ್ಥಿಸಲು ಆರೋಪಿಗಳಿಗೆ ಸಾಧ್ಯವಾಗಿಲ್ಲ. ಮೇಲ್ಮನವಿ ಸಲ್ಲಿಸಿರುವ ಪ್ರಕರಣದ ಆರೋಪಿಗಳು, ದೂರುದಾರ/ ಪ್ರತಿವಾದಿ ಬಿ ವಿ ಸೀತಾರಾಮ್‌ ಅವರ ವಿರುದ್ಧ ಪ್ರಕಟಿಸಿದ ಲೇಖನಗಳಿಗೆ ಸಂಬಂಧಿಸಿದಂತೆ ಹೊಣೆಯರಿತು ನಡೆದುಕೊಂಡಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Also Read
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಮಂಗಳೂರು ವಿವಿ ಸಹಾಯಕ ಪ್ರಾಧ್ಯಾಪಕರನ್ನು ಆರೋಪ ಮುಕ್ತಗೊಳಿಸಿದ ಹೈಕೋರ್ಟ್‌

ಪ್ರಕರಣದ ಮೂರನೇ ಆರೋಪಿಗೆ ಬಿ ವಿ ಸೀತಾರಾಮ್‌ ಅವರ ವಿರುದ್ಧ ಮಾಡಿದ ಆರೋಪದ ಬಗ್ಗೆ ಅರಿವಿತ್ತು ಎಂಬುದು ಪುರಾವೆಗಳಿಂದ ಸ್ಪಷ್ಟವಾಗಿದೆ. ಆದ್ದರಿಂದ ಮೊದಲನೇ ಮತ್ತು ಮೂರನೇ ಆರೋಪಿಗಳು ದೂರುದಾರ ಸೀತಾರಾಮ್‌ ಅವರ ವಿರುದ್ಧ ತಮ್ಮ ಪತ್ರಿಕೆ ʼಕರಾವಳಿ ಮಾರುತʼದಲ್ಲಿ ಬರೆದ ಅವಹೇಳನಕಾರಿ ಲೇಖನಕ್ಕೆ ಹೊಣೆಗಾರರಾಗಿರುತ್ತಾರೆ. ಜೊತೆಗೆ ಕೆಳ ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಲು ಮೇಲ್ಮನವಿದಾರರು ಯಾವುದೇ ಆಧಾರ ನೀಡಿಲ್ಲ ಎಂದು ನ್ಯಾಯಾಲಯ ನುಡಿದಿದೆ.

ಮ್ಯಾಜಿಸ್ಟೇಟ್‌ ನ್ಯಾಯಾಲಯ ಆರೋಪಿಗಳು/ ಅಪೀಲುದಾರರನ್ನು ತಪ್ಪಿತಸ್ಥರೆಂದು ಪರಿಗಣಿಸಿದ್ದು ಐಪಿಸಿ ಸೆಕ್ಷನ್‌ 500, 501 ಮತ್ತು 502ರ ಅಡಿ ಅದು ವಿಧಿಸಿರುವ ಶಿಕ್ಷೆಯ ತೀರ್ಪನ್ನು ಎತ್ತಿ ಹಿಡಿಯುತ್ತಿರುವುದಾಗಿ ಜಿಲ್ಲಾ ನ್ಯಾಯಾಲಯ ತಿಳಿಸಿದೆ. ಆರೋಪಿಗಳಿಗೆ ವಿಧಿಸಲಾದ ಶಿಕ್ಷೆಗಳನ್ನು ಏಕಕಾಲಕ್ಕೆ ಜಾರಿಗೊಳಿಸುವಂತೆ ಕೆಳ ನ್ಯಾಯಾಲಯ ನೀಡಿರುವ ತೀರ್ಪಿನಲ್ಲಿ ಯಾವುದೇ ಅನುಚಿತತೆ ಕಂಡುಬಂದಿಲ್ಲ ಎಂದು ಅದು ವಿವರಿಸಿದೆ.

ವೃತ್ತಿಪರ ಅಸೂಯೆಯಿಂದ ತಮ್ಮ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸುತ್ತಿದ್ದ ಕರಾವಳಿ ಮಾರುತ ಪತ್ರಿಕೆಯ ವಿರುದ್ಧ ದೂರುದಾರ ಬಿ ವಿ ಸೀತಾರಾಮ್‌ ಮತ್ತು ಅವರ ಪತ್ನಿ ಕೆಳ ನ್ಯಾಯಾಲಯದ ಮೊರೆ ಹೋಗಿದ್ದರು. ಕರಾವಳಿ ಅಲೆ ಪತ್ರಿಕೆ ಮತ್ತು ಅದರ ಪ್ರಸರಣವನ್ನು ಕಡಿಮೆ ಮಾಡಲು ಆರೋಪಿಗಳು ಸಭ್ಯತೆಯ ಎಲ್ಲಾ ಎಲ್ಲೆ ಮೀರಿದ್ದಾರೆ. ಅವರ ಕೃತ್ಯ ಪೀತ ಪತ್ರಿಕೋದ್ಯಮವಲ್ಲದೆ ಬೇರೇನೂ ಅಲ್ಲ. ಇದರಿಂದ ತಮ್ಮ ಚಾರಿತ್ರ್ಯ ಹರಣವಾಗಿದೆ ಎಂದು ಅಳಲು ತೋಡಿಕೊಳ್ಳಲಾಗಿತ್ತು.

ಎರಡೂ ಕಡೆಯ ವಾದ ಆಲಿಸಿದ್ದ ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ಒಂದು ವರ್ಷ ಅವಧಿಗೆ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ತಮ್ಮನ್ನು ದೋಷಿ ಎಂದು ಕೆಳ ನ್ಯಾಯಾಲಯ ನೀಡಿರುವ ತೀರ್ಪು ಕಾನೂನುಬಾಹಿರ. ವಾಸ್ತವಾಂಶಗಳನ್ನು ಅದು ಪರಿಗಣಿಸಿಲ್ಲ. ದೂರುದಾರ ಬಿ ವಿ ಸೀತಾರಾಮ್‌ ಅವರು ವಿವಿಧ ಪ್ರಕರಣಗಳಲ್ಲಿ ಅಪರಾಧಿಯಾಗಿದ್ದಾರೆ ಎಂದು ಆರೋಪಿಗಳು ಜಿಲ್ಲಾ ನ್ಯಾಯಾಲಯಕ್ಕೆ ತಿಳಿಸಿದ್ದರು.

Kannada Bar & Bench
kannada.barandbench.com