ಇಂಡಿಯಾ ಟುಡೆ ಸಮೂಹ ಮತ್ತು ಅದರ ಸಲಹಾ ಸಂಪಾದಕ ರಾಜ್‌ದೀಪ್ ಸರ್ದೇಸಾಯಿ ವಿರುದ್ಧ ಪತ್ರಕರ್ತ ರಾಕೇಶ್ ಸಿಂಹ ಅವರು ಮಾಡಿದ ಟ್ವೀಟ್‌ಗಳನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಮೇಲ್ನೋಟಕ್ಕೆ ಮಾನಹಾನಿಕರ ಎಂದು ಘೋಷಿಸಿದೆ.
ಲಿವಿಂಗ್ ಮೀಡಿಯಾ ಇಂಡಿಯಾ ಲಿಮಿಟೆಡ್ (ಇಂಡಿಯಾ ಟುಡೆ ಗ್ರೂಪ್) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಸಿಂಹ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದು ಇದೇ ವೇಳೆ ಆಕ್ಷೇಪಾರ್ಹ ಟ್ವೀಟ್‌ಗಳನ್ನು ತೆಗೆದುಹಾಕುವಂತೆ ಪ್ರಮುಖ ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟರ್ ಗೆ ಸೂಚಿಸಿದೆ.
ಟ್ವೀಟ್‌ಗಳು ಮಾನಹಾನಿಕರ ಮತ್ತು ಸುಳ್ಳು ಎಂದು ಆಕ್ಷೇಪಿಸಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾ. ರಾಜೀವ್ ಶಖ್ದೇರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಕೋರ್ಟ್ ನಿರ್ದೇಶಿಸಿದರೆ ಆಕ್ಷೇಪಾರ್ಹ ಟ್ವೀಟ್ ಗಳನ್ನು ತೆಗೆದುಹಾಕುವುದಾಗಿ ಟ್ವಿಟರ್ ಪರ ವಾದ ಮಂಡಿಸಿದ್ದ ವಕೀಲ ಎ ಕಾರ್ತಿಕ್ ಈ ಹಿಂದೆ ತಿಳಿಸಿದ್ದರು.
ಇದಲ್ಲದೆ, ಇಂಡಿಯಾ ಟುಡೆ ಸಮೂಹ ಸುಮಿತ್ ಮುಖರ್ಜಿ ಅವರ ಕುರಿತ ಸುದ್ದಿಯನ್ನು ತೆಗೆದುಹಾಕಿತ್ತು ಎಂದು ಕೂಡ ಸಿಂಹ ಆರೋಪಿಸಿದ್ದರು. ಈ ಸಂದರ್ಭದಲ್ಲಿ ಅವರು ಪತ್ರಿಕೆ ಪ್ರಸರಣಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ತಪ್ಪಾಗಿ ಉಲ್ಲೇಖಿಸಿದ್ದಾರೆ. ಜೊತೆಗೆ ಸಮೂಹದ ವ್ಯವಸ್ಥಾಪಕ ಸಂಪಾದಕ ರಾಜ್ ಚೆಂಗಪ್ಪ ಅವರು ಬರೆದಿದ್ದ ‘ವೆಪನ್ಸ್ ಆಫ್ ಪೀಸ್: ಸೀಕ್ರೆಟ್ ಸ್ಟೋರಿ ಆಫ್ ಇಂಡಿಯಾಸ್ ಕ್ವೆಸ್ಟ್ ಟು ಬಿ ಎ ನ್ಯೂಕ್ಲಿಯರ್ ಪವರ್’ ಗ್ರಂಥದ ಬಗ್ಗೆಯೂ ಅವರು ಸುಳ್ಳು ಹೇಳಿಕಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಲಿವಿಂಗ್ ಮೀಡಿಯಾ ಸಂಸ್ಥೆ ಪರವಾಗಿ ಹಾಜರಿದ್ದ ವಕೀಲ ಹೃಷಿಕೇಶ್ ಬರೂವ ಅವರು ಮಂಡಿಸಿದ ವಾದದ ಪ್ರಮುಖಾಂಶಗಳು ಹೀಗಿವೆ:
ಸಿಂಹ ಅವರಿಗೆ ಕರ್ತವ್ಯದಿಂದ ಬಿಡುಗಡೆಯಾಗುವಂತೆ ಪತ್ರ ನೀಡಿದ ಸಾಕಷ್ಟು ಸಮಯದ ನಂತರ ಮುಖರ್ಜಿ ಅವರಿಗೆ ಸಂಬಂಧಿಸಿದ ಸುದ್ದಿಯನ್ನು 2003ರಲ್ಲಿ ಇಂಡಿಯಾ ಟುಡೆ ನಿಯತಕಾಲಿಕೆ ಪ್ರಕಟಿಸಿದೆ.
ಸಮೂಹದ ಘೋಷಿತ ಪ್ರಸರಣದ ವಿವರಗಳು ಅಂಕಿ-ಅಂಶಗಳಿಂದ ಬೆಂಬಲಿತವಾಗಿದೆ.
ಚೆಂಗಪ್ಪ ಅವರ ಪುಸ್ತಕವನ್ನು ಹಾರ್ಪರ್ ಕಾಲಿನ್ಸ್ ಪ್ರಕಾಶ ಸಂಸ್ಥೆ ಪ್ರಕಟಿಸಿದ್ದು ಸಿಂಹ ಆರೋಪಿಸಿರುವಂತೆ ಇಂಡಿಯಾ ಟುಡೆ ಸೋದರ ಸಂಸ್ಥೆಯಾದ 'ಬುಕ್ಸ್ ಟುಡೆ' ಪ್ರಕಾಶನದಿಂದ ಅಲ್ಲ.
ವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ಹೀಗೆ ಅಭಿಪ್ರಾಯಪಟ್ಟರು:
ಈ ಸಂಬಂಧ ನೊಟೀಸ್ ಜಾರಿ ಮಾಡಲಾಗಿದ್ದು ವಿಚಾರಣೆಯನ್ನು ನ.19ಕ್ಕೆ ಮುಂದೂಡಲಾಗಿದೆ.