ಪದೇಪದೇ ಮೆಮೊ ಸಲ್ಲಿಸಿದರೂ ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗುತ್ತಿಲ್ಲ. ಈ ಸಂಬಂಧ ಮುಖ್ಯ ನ್ಯಾಯಮೂರ್ತಿಗಳು ರಿಜಿಸ್ಟ್ರಿಗೆ ಸಕ್ರಿಯವಾಗಿ ದಾವೆದಾರರಿಗೆ ಸ್ಪಂದಿಸಲು ಸೂಚಿಸಬೇಕು ಎಂದು ಬೆಂಗಳೂರು ವಕೀಲರ ಸಂಘ ಕೋರಿದೆ.
ಹೈಕೋರ್ಟ್ ಮುಂದೆ ಪ್ರಕರಣಗಳನ್ನು ಪಟ್ಟಿ ಮಾಡುವುದು ತುಂಬಾ ತಡವಾಗುತ್ತಿದೆ. ಪದೇಪದೇ ಮೆಮೊ ಸಲ್ಲಿಸಿದರೂ ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗುತ್ತಿಲ್ಲ. ಐದಾರು ಬಾರಿ ಪ್ರಕರಣಗಳನ್ನು ಪಟ್ಟಿ ಮಾಡುವಂತೆ ಮೆಮೊ ಸಲ್ಲಿಸಿದರೂ ಅವುಗಳನ್ನು ವಿಚಾರಣೆಗೆ ಪಟ್ಟಿ ಮಾಡದ ಉದಾಹರಣೆಗಳಿವೆ. ಆಡಳಿತದಲ್ಲಿ ರಿಜಿಸ್ಟ್ರಿಯು ಮತ್ತಷ್ಟು ಸಮರ್ಥವಾಗಬೇಕಿದೆ. ಇಲ್ಲವಾದಲ್ಲಿ ನ್ಯಾಯದಾನದ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಸಂಘವು ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.
ಸರಿಯಾಗಿ ಸ್ಪಂದಿಸದ ನ್ಯಾಯಾಲಯದ ಸಿಬ್ಬಂದಿಯ ವಿರುದ್ಧ ಕ್ರಮಕೈಗೊಳ್ಳಲು ವಿಚಕ್ಷಣಾ ದಳವನ್ನು ಎಚ್ಚರಿಸಬೇಕಿದೆ. ಈ ಸಂಬಂಧ ವಕೀಲರ ಸಾಮಾನ್ಯ ಸಭೆಯನ್ನು ಕರೆಯಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲಾ ನ್ಯಾಯಾಲಯಗಳಲ್ಲೂ ಸಾರ್ವಜನಿಕ ಶೌಚಾಲಯಗಳ ಸ್ಥಿತಿ ದಯನೀಯವಾಗಿದೆ. ನ್ಯಾಯಾಲಯಗಳಲ್ಲಿ ವಕೀಲರು ಮತ್ತು ಸಾರ್ವಜನಿಕರಿಗೆ ಸೂಕ್ತವಾದ ಸೌಲಭ್ಯಗಳಿಲ್ಲ. ಇವುಗಳನ್ನು ತುರ್ತಾಗಿ ಬಗೆಹರಿಸಲು ಕಾನೂನು ಸಚಿವರು ಮುಂದಾಗಬೇಕು. ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ವೃದ್ಧಿಸಬೇಕು ಎಂದು ವಕೀಲರ ಸಂಘವು ಇದೇ ವೇಳೆ ರಾಜ್ಯ ಸರ್ಕಾರವನ್ನು ಕೋರಿದೆ.
ಇದೇ ವೇಳೆ, ಉತ್ತರ ಪ್ರದೇಶದ ಹಾಪುರ್‌ನಲ್ಲಿ ವಕೀಲರ ಮೇಲೆ ಪೊಲೀಸರು ನಡೆಸಿರುವ ಹಲ್ಲೆಯು ಖಂಡನೀಯ. ಈ ಘಟನೆಯಲ್ಲಿ ಹಲವು ವಕೀಲರು ಗಾಯಗೊಂಡಿದ್ದು, ಅಲ್ಲಿನ ವಕೀಲರಿಗೆ ಬೆಂಬಲ ಸೂಚಿಸಲಾಗಿದೆ ಎಂದು ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.