ಬಡವರಿಗೆ ವಸತಿ ಸಮುಚ್ಚಯ ನಿರ್ಮಿಸಲು ವಿಳಂಬ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ

1,512 ಹಕ್ಕುದಾರರಿಗೆ ವಸತಿ ಸಮಚ್ಛಯ ನಿರ್ಮಿಸಿಕೊಡಬೇಕು. ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿಗೆ ಅನುಮೋದನೆ ದೊರೆತ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದ್ದ ಹೈಕೋರ್ಟ್‌.
Karnataka HC Chief Justice P B Varale and Justice Ashok S Kinagi
Karnataka HC Chief Justice P B Varale and Justice Ashok S Kinagi

ಆರ್ಥಿಕವಾಗಿ ದುರ್ಬಲ ವರ್ಗಗಳ ಜನರಿಗೆ ಬೆಂಗಳೂರಿನ ಕೋರಮಂಲಗದ ಈಜಿಪುರ ವ್ಯಾಪ್ತಿಯಲ್ಲಿನ ಉದ್ದೇಶಿತ ವಸತಿ ಸಮುಚ್ಛಯ (ಅಪಾರ್ಟ್‌ಮೆಂಟ್) ನಿರ್ಮಿಸುವುದರಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ಬುಧವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಕರ್ನಾಟಕ ಈಜಿಪುರ ನಿವಾಸಿಗಳ ಸಾಮಾಜಿಕ ಕಲ್ಯಾಣ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಪ್ರತಿವಾದಿಗಳಾದ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಬಿಬಿಎಂಪಿ, ಬಿಡಿಎ ಮತ್ತು ಗುತ್ತಿಗೆದಾರ ಕಂಪೆನಿ ಮೇವರಿಕ್ ಹೋರ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೋಟಿಸ್ ಜಾರಿಗೊಳಿಸಿದ್ದು, ಪ್ರತಿಕ್ರಿಯಿಸುವಂತೆ ಆದೇಶಿಸಿದೆ.

ಈಜಿಪುರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ 1,512 ಮನೆಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ನಕ್ಷೆ ಅನುಮೋದನೆ ಆದ 18 ತಿಂಗಳ ಒಳಗೆ ವಸತಿಗೃಹ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು. ಇದಕ್ಕಾಗಿ ಕಾಮಗಾರಿಯ ಗುತ್ತಿಗೆ ಪಡೆದ ಕಂಪೆನಿ ಮೇವರಿಕ್ ಹೋರ್ಡಿಂಗ್ಸ್ ಪ್ರೈವೇಟ್‌ ಲಿಮಿಟೆಡ್‌ ಮುಚ್ಚಳಿಕೆ ಬರೆದುಕೊಡಬೇಕು ಎಂದು 2017ರ ಮೇ 31ರಂದು ಹೈಕೋರ್ಟ್ ಆದೇಶಿಸಿತ್ತು ಎಂದು ಅರ್ಜಿದಾರ ಪರ ವಕೀಲರು ತಿಳಿಸಿದರು.

ಹೈಕೋರ್ಟ್ ಆದೇಶದಂತೆ ಕಾಮಗಾರಿ ಆರಂಭಿಸಿದ್ದರೂ ಈವರೆಗೂ ಪೂರ್ಣಗೊಳಿಸಿಲ್ಲ. ಹೀಗಾಗಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶಿಸಬೇಕು. ಕಾಮಗಾರಿ ಪೂರ್ಣಗೊಳಿಸುವವರೆಗೆ ವಸತಿ ಹಕ್ಕುದಾರರಿಗೆ ಮಾಸಿಕ ಬಾಡಿಗೆ ಹಣ ನೀಡಲು ಆದೇಶಿಸಬೇಕು ಎಂದು ಕೋರಿದರು.

ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ಪೀಠವು ನಿರ್ಮಾಣ ಕಾಮಗಾರಿ ವಿಳಂಬವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ವಸತಿ ಸಮುಚ್ಛಯ ನಿರ್ಮಾಣ ವಿಚಾರದಲ್ಲಿ ಬಿಬಿಎಂಪಿ ಮತ್ತು ಮೇವರಿಕ್ ನಡುವಿನ ವಿವಾದದಿಂದ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ. ಮನೆಗಳಿಗಾಗಿ ನಿವಾಸಿಗಳು ಇನ್ನೂ ಎಷ್ಟು ವರ್ಷ ಕಾಯಬೇಕು ಎಂದು ಖಾರವಾಗಿ ಪ್ರಶ್ನಿಸಿತು. ನಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಎಲ್ಲಾ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ಡಿಸೆಂಬರ್‌ 7ಕ್ಕೆ ಮುಂದೂಡಿತು.

ಕೋರಮಂಗಲದ ಈಜಿಪುರದಲ್ಲಿ ಆರ್ಥಿಕವಾಗಿ ಹಿಂದುಳಿದವರು ನೆಲೆಸಿದ್ದ ವಸತಿ ಸಮುಚ್ಛಯ 2004ರಲ್ಲಿ ಕುಸಿದಿತ್ತು. ಈ ವಿಚಾರವಾಗಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತು ನ್ಯಾಯಾಂಗ ನಿಂದನೆಯ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, 1,512 ಹಕ್ಕುದಾರರಿಗೆ ವಸತಿ ಸಮಚ್ಛಯ ನಿರ್ಮಿಸಿಕೊಡಬೇಕು. ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿಗೆ ಅನುಮೋದನೆ ದೊರೆತ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿತ್ತು. ಇದೀಗ ಮತ್ತೆ ಹೈಕೋರ್ಟ್‌ಗೆ ಹೊಸದಾಗಿ ಪಿಐಎಲ್ ಸಲ್ಲಿಸಿರುವ ಹಕ್ಕುದಾರರು, ನಿಗದಿತ ಕಾಲಮಿತಿಯಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಆರೋಪಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com