ಸಾಗುವಳಿ ಚೀಟಿ ಮಂಜೂರು ಮಾಡಲು ವಿಳಂಬ: ತಹಶೀಲ್ದಾರ್‌ ವಿರುದ್ಧ ದೋಷರೋಪ ನಿಗದಿಪಡಿಲು ಹೈಕೋರ್ಟ್‌ ನಿರ್ಧಾರ

ಸಾಗುವಳಿ ಚೀಟಿ ನೀಡಲು ಸಾಧ್ಯವಿಲ್ಲ ಎಂಬ ತಹಶೀಲ್ದಾರರ ಹಿಂಬರಹವನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಪಡಿಸಿ, ಎರಡು ತಿಂಗಳೊಳಗೆ ಸಾಗುವಳಿ ಚೀಟಿ ಮಂಜೂರು ಮಾಡಬೇಕು ಎಂದು 2022ರ ಸೆಪ್ಟೆಂಬರ್‌ 28ರಂದು ನಿರ್ದೇಶನ ನೀಡಿತ್ತು.
Karnataka High Court
Karnataka High Court

ನ್ಯಾಯಾಲಯದ ಆದೇಶದ ಹೊರತಾಗಿಯೂ ಜಮೀನು ಮಾಲೀಕರಿಗೆ ಸಾಗುವಳಿ ಚೀಟಿ ಮಂಜೂರು ಮಾಡಲು ವಿಳಂಬ ಮಾಡಿರುವ ಬೆಂಗಳೂರು ಉತ್ತರ ಹೆಚ್ಚುವರಿ ತಾಲ್ಲೂಕಿನ (ಈಗ ಯಲಹಂಕ ತಾಲ್ಲೂಕು) ತಹಶೀಲ್ದಾರರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದ ದೋಷಾರೂಪ ನಿಗದಿಪಡಿಸಲು ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರ್ಧರಿಸಿದೆ.

ಸಾಗುವಳಿ ಚೀಟಿ ನೀಡಬೇಕು ಎಂಬ ನ್ಯಾಯಾಲಯದ ಆದೇಶವನ್ನು ಪಾಲಿಸದ ತಹಶೀಲ್ದಾರರ ವಿರುದ್ಧ ತಾರಹುಣಸೆ ಅಗ್ರಹಾರ ನಿವಾಸಿ ದೊಡ್ಡಣ್ಣ ಎಂಬುವರು ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಪ್ರಸನ್ನ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರು, ಸಾಗುವಳಿ ಚೀಟಿ ಮಂಜೂರು ಮಾಡುವಂತೆ ಕೋರಿ ಅರ್ಜಿದಾರರು ಮನವಿ ಸಲ್ಲಿಸಿದರೆ, ಅದನ್ನು ಕಾನೂನು ರೀತಿ ಪರಿಶೀಲಿಸಿ ತಹಶೀಲ್ದಾರರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಆದರೆ, ಸರ್ಕಾರಿ ವಕೀಲರ ವಾದ ಒಪ್ಪದ ಪೀಠವು 2005ರಲ್ಲಿ ಸಾಗುವಳಿ ಚೀಟಿ ನೀಡುವ ತೀರ್ಮಾನವಾಗಿದೆ. ಅರ್ಜಿದಾರರು ತಹಶೀಲ್ದಾರರಿಗೆ ಮನವಿಯನ್ನೂ ಕೊಟ್ಟಿದ್ದಾರೆ. ಸಾಗುವಳಿ ಚೀಟಿ ನೀಡಲು ಸಾಧ್ಯವಿಲ್ಲ ಎಂಬ ತಹಶೀಲ್ದಾರರ ಹಿಂಬರಹವನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಪಡಿಸಿ, ಎರಡು ತಿಂಗಳೊಳಗೆ ಸಾಗುವಳಿ ಚೀಟಿ ಮಂಜೂರು ಮಾಡಬೇಕು ಎಂದು 2022ರ ಸೆಪ್ಟೆಂಬರ್‌ 28ರಂದು ನಿರ್ದೇಶನ ನೀಡಿತ್ತು. ಆದರೆ, ಆಧಾರರಹಿತ ತಾಂತ್ರಿಕ ನೆಪಗಳನ್ನು ಮುಂದಿಟ್ಟುಕೊಂಡು ತಹಶೀಲ್ದಾರ ಸಾಗುವಳಿ ಚೀಟಿ ನೀಡಲು ವಿಳಂಬ ಮಾಡಿದ್ದಾರೆ ಎಂದು ಪೀಠ ಹೇಳಿತು.

ಸಾಮಾನ್ಯವಾಗಿ ಅಧಿಕಾರಿಗಳ ಇಂತಹ ಬೇಜವಾಬ್ದಾರಿ ವರ್ತನೆಯಿಂದ ಸಾರ್ವಜನಿಕರು ನ್ಯಾಯಾಲಯದ ಮೊರೆ ಹೋಗುತ್ತಾರೆ. ಸುಲಭವಾಗಿ ಇತ್ಯರ್ಥವಾಗಬಹುದಾದ ಇಂತಹ ಪ್ರಕರಣಗಳು ನ್ಯಾಯಾಲಯಕ್ಕೆ ಬರುವುದರಿಂದ ನ್ಯಾಯಾಲಯದ ಅಮೂಲ್ಯ ಸಮಯವೂ ಅಪವ್ಯಯ ಆಗುತ್ತದೆ. ಈ ಪ್ರಕರಣದಲ್ಲಿ ತಹಶೀಲ್ದಾರರಿಗೆ ನ್ಯಾಯಾಲಯದ ಆದೇಶದ ಬಗ್ಗೆ ಗಂಭೀರತೆ ಇಲ್ಲದಿರುವುದು ಸ್ಪಷ್ಟವಾಗುತ್ತಿದೆ. ಆದ್ದರಿಂದ, ಮುಂದಿನ ವಿಚಾರಣೆ ವೇಳೆ ತಹಶೀಲ್ದಾರರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ದೋಷಾರೂಪಣೆ ನಿಗದಿಪಡಿಸಲಾಗುವುದು. ಆ ದಿನ ತಹಶೀಲ್ದಾರರು ವಿಚಾರಣೆಗೆ ಖದ್ದು ಹಾಜರಾಗಬೇಕು ಎಂದು ನಿರ್ದೇಶನ ನೀಡಿದ ಪೀಠ ವಿಚಾರಣೆ ಎರಡು ವಾರ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com