ಸೂಕ್ಷ್ಮ ಪ್ರಕರಣಗಳಲ್ಲಿ ಎಫ್‌ಐಆರ್‌ ಅನ್ನು ವೆಬ್‌ಸೈಟ್‌ಗೆ ಹಾಕಲು ತಡ: ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ ಲೋಕಾಯುಕ್ತ

ಒಂದು ದಿನದ ಒಳಗೆ ಎಫ್‌ಐಆರ್‌ಗಳನ್ನು ಲೋಕಾಯುಕ್ತ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ವಕೀಲ ಎಸ್‌ ಉಮಾಪತಿ ಅರ್ಜಿ ಸಲ್ಲಿಸಿದ್ದರು.
Lokayukta and Karnataka HC
Lokayukta and Karnataka HC
Published on

ಸೂಕ್ಷ್ಮ ಪ್ರಕರಣಗಳಿಗೆ ಸಂಬಂಧಿಸಿದ ಎಫ್‌ಐಆರ್‌ಗಳನ್ನು ಮಾತ್ರ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲು ಲೋಕಾಯುಕ್ತ ಪೊಲೀಸ್‌ ವಿಭಾಗ ತಡ ಮಾಡುತ್ತದೆ ಎಂದು ರಾಜ್ಯ ಸರ್ಕಾರವು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಒಂದು ದಿನದ ಒಳಗೆ ಎಫ್‌ಐಆರ್‌ಗಳನ್ನು ಲೋಕಾಯುಕ್ತ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ವಕೀಲ ಎಸ್‌ ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಲೋಕಾಯುಕ್ತ ಪೊಲೀಸ್‌ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರ ಅಫಿಡವಿಟ್‌ ಅನ್ನು ಪೊಲೀಸ್‌ ವರಿಷ್ಠಾಧಿಕಾರಿಯು ನ್ಯಾಯಾಲಯಕ್ಕೆ ಸಲ್ಲಿಸಿದರು. ಇದನ್ನು ಪರಿಗಣಿಸಿದ ನ್ಯಾಯಾಲಯವು ಅರ್ಜಿಯನ್ನುಇತ್ಯರ್ಥಪಡಿಸಿತು.

ಲೋಕಾಯುಕ್ತವನ್ನು ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್‌ ಅರಬಟ್ಟಿ ಅವರು “ಕೆಲವು ಪ್ರಕರಣಗಳಲ್ಲಿ ಎಫ್‌ಐಆರ್‌ ಅಪ್‌ಲೋಡ್‌ ಮಾಡಿದ ಆನಂತರ ಪ್ರಕರಣದ ಮಾಹಿತಿಯನ್ನು ನೋಂದಾಯಿಸುವುದರಿಂದ ಅದು ಆರೋಪಿಗಳಿಗೆ ಗೊತ್ತಾಗಲಿದೆ. ಇದು ಸಾಕ್ಷ್ಯಕ್ಕೆ ಅಡ್ಡಿಯಾಗಲಿದ್ದು, ಅದು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಉದ್ದೇಶವನ್ನು ಸೋಲಿಸಲಿದೆ” ಎಂದರು.

Also Read
ವೆಬ್‌ಸೈಟ್‌ನಲ್ಲಿ ಎಫ್‌ಐಆರ್‌ ಹಾಕಲು ಲೋಕಾಯುಕ್ತಕ್ಕೆ ನಿರ್ದೇಶನ ಕೋರಿ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

“ಆರೋಪಿಯ ಹಕ್ಕು ಮತ್ತು ವಿಸ್ತೃತ ನೆಲೆಯಲ್ಲಿ ಸಮಾನತೆ ಸಾಧಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್‌ ಆದೇಶದ ಪಾಲನೆಯನ್ನು ಗಮನದಲ್ಲಿಟ್ಟುಕೊಂಡು, ಸೂಕ್ಷ್ಮ ಪ್ರಕರಣಗಳಲ್ಲಿ ಎಫ್‌ಐಆರ್‌ ಅಪ್‌ಲೋಡ್‌ ಮಾಡುವುದನ್ನು ಲೋಕಾಯುಕ್ತ ಪೊಲೀಸರು ತಡ ಮಾಡುತ್ತಿದ್ದಾರೆ. ಉಳಿದ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲಾಗುತ್ತಿದೆ” ಎಂದರು.

Kannada Bar & Bench
kannada.barandbench.com