ದಯಾನಂದ ಸಾಗರ್ ಶೈಕ್ಷಣಿಕ ಸಂಸ್ಥೆಗಳ ನೌಕರರ ವೇತನ ಕುರಿತ ಪ್ರಕರಣ : ₹50,000 ದಂಡ ಪಾವತಿಸಿದ ಮರುಪರಿಶೀಲನಾ ಪ್ರಾಧಿಕಾರಿ

ದಯಾನಂದ ಸಾಗರ್ ಶೈಕ್ಷಣಿಕ ಸಂಸ್ಥೆಗಳ ನೌಕರರ ಮನವಿ ಪರಿಗಣಿಸಲು ಏಕಸದಸ್ಯ ಪೀಠವು 2020ರ ಮಾರ್ಚ್‌ 11ರಂದು ನೀಡಿದ ಆದೇಶ ಪಾಲಿಸಿಲ್ಲ ಎಂದು ಆಕ್ಷೇಪಿಸಿ ಹರ್ಷ ಅರ್ಜಿ ಸಲ್ಲಿಸಿದ್ದಾರೆ.
High Court of Karnataka
High Court of Karnataka
Published on

ಸರ್ಕಾರಿ ನೌಕರರಿಗೆ ಸರಿಸಮನಾಗಿ ದಯಾನಂದ ಸಾಗರ್ ಶೈಕ್ಷಣಿಕ ಸಂಸ್ಥೆಗಳ ನೌಕರರಿಗೆ ವೇತನ ನೀಡುವ ಕುರಿತ ಮನವಿ ಪರಿಗಣಿಸಲು ಎರಡು ವರ್ಷ ವಿಳಂಬ ಮಾಡಿದ ಪ್ರಕರಣದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಮರುಪರಿಶೀಲನಾ ಪ್ರಾಧಿಕಾರಿಯು ಕರ್ನಾಟಕ ಹೈಕೋರ್ಟ್‌ನ ಆದೇಶದಂತೆ ಸಂತ್ರಸ್ತ ಅರ್ಜಿದಾರರಿಗೆ ₹50,000 ದಂಡ ಪಾವತಿಸಿದ್ದಾರೆ.

ದಯಾನಂದ ಸಾಗರ ಕಾಲೇಜ್ ಆಫ್ ಎಂಜಿನಿಯರಿಂಗ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಲ್ ಹರ್ಷ ಅವರು ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ದಯಾನಂದ ಸಾಗರ್ ಶೈಕ್ಷಣಿಕ ಸಂಸ್ಥೆಗಳ ನೌಕರರ ಮನವಿ ಪರಿಗಣಿಸಲು ಏಕಸದಸ್ಯ ಪೀಠವು 2020ರ ಮಾರ್ಚ್‌ 11ರಂದು ನೀಡಿದ ಆದೇಶ ಪಾಲಿಸಿಲ್ಲ ಎಂದು ಆಕ್ಷೇಪಿಸಿ ಹರ್ಷ ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಉನ್ನತ ಶಿಕ್ಷಣ ಇಲಾಖೆಯ ಮರುಪರಿಶೀಲನಾ ಪ್ರಾಧಿಕಾರಿಗೆ ₹50,000 ದಂಡ ವಿಧಿಸಿತ್ತು. ದಂಡದ ಮೊತ್ತವನ್ನು ಸರ್ಕಾರವು ಪಾವತಿಸಬಾರದು, ಸಂಬಂಧಪಟ್ಟ ಪ್ರಾಧಿಕಾರಿಯು 15 ದಿನದಲ್ಲಿ ಪಾವತಿಸಬೇಕು. ತಪ್ಪಿದಲ್ಲಿ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸಬೇಕಾಗುತ್ತದೆ ಎಂದು 2022ರ ನವೆಂಬರ್‌ 8ರಂದು ಆದೇಶಿಸಿತ್ತು. ಮರುಪರಿಶೀಲನಾ ಪ್ರಾಧಿಕಾರಿಯು₹50,000 ದಂಡವನ್ನು ಸಂತ್ರಸ್ತ ಅರ್ಜಿದಾರರಿಗೆ ಪಾವತಿಸಿದ್ದಾರೆ. ಇದನ್ನು ಪರಿಗಣಿಸಿದ ವಿಭಾಗೀಯ ಪೀಠವು ಮರುಪರಿಶೀಲನಾ ಪ್ರಾಧಿಕಾರಿ ಮತ್ತು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಮೇಲಿನ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಕೈಬಿಟ್ಟಿದೆ.

ಪ್ರಕರಣದ ಹಿನ್ನೆಲೆ: ರಾಜ್ಯ ಸರ್ಕಾರಿ ನೌಕರರಿಗೆ ಸರಿಸಮನಾಗಿ ತಮಗೂ ವೇತನ ಹಾಗೂ ಸೌಲಭ್ಯ ವಿಸ್ತರಿಸಲು ನಿರ್ದೇಶಿಸಬೇಕು ಎಂದು ಕೋರಿ ದಯಾನಂದ ಸಾಗರ ಶಿಕ್ಷಣ ಸಂಸ್ಥೆಗಳ 27 ಬೋಧಕೇತರ ಕಾಯಂ ನೌಕರರು 2019ರಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಉನ್ನತ ಶಿಕ್ಷಣ ಇಲಾಖೆಯ ಮರು ಪಶೀಲನಾ ಪ್ರಾಧಿಕಾರ (ಇಲಾಖೆ ಪ್ರಧಾನ ಕಾರ್ಯದರ್ಶಿ) ಅರ್ಜಿದಾರ ನೌಕರರ ಮನವಿಯನ್ನು ಕರ್ನಾಟಕ ಶಿಕ್ಷಣ ಕಾಯಿದೆ-1983ರ ಅಡಿಯಲ್ಲಿ ಪುನರ್ ವಿಮರ್ಶೆ ಮಾಡಿ ನಾಲ್ಕು ತಿಂಗಳಲ್ಲಿ ಸೂಕ್ತ ಆದೇಶ ಹೊರಡಿಸಬೇಕು ಎಂದು 2020ರ ಮಾರ್ಚ್‌ 3ರಂದು ಹೈಕೋರ್ಟ್ ಏಕಸದಸ್ಯ ಪೀಠವು ಆದೇಶ ಮಾಡಿತ್ತು.

ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಲ್ ಹರ್ಷ ಅವರು 2021ರ ಡಿಸೆಂಬರ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ, ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ಮರು ಪರಿಶೀಲನಾ ಪ್ರಾಧಿಕಾರ ಪಾಲಿಸಿಲ್ಲ ಎಂದು ಆರೋಪಿಸಿದ್ದರು. ಇದರಿಂದ ವಿಭಾಗೀಯ ಪೀಠವು ಮರು ಪಶೀಲನಾ ಪ್ರಾಧಿಕಾರದ ಅಧಿಕಾರಿಗೆ ₹50,000 ದಂಡ ವಿಧಿಸಿತ್ತು.

Kannada Bar & Bench
kannada.barandbench.com