[ದೆಹಲಿ ವಾಯು ಮಾಲಿನ್ಯ] ಮಾಧ್ಯಮಗಳು ನಮ್ಮನ್ನು ಖಳನಾಯಕರ ರೀತಿ ಬಿಂಬಿಸುತ್ತಿವೆ: ಸುಪ್ರೀಂ ಕೋರ್ಟ್‌ ಅಸಮಾಧಾನ

“ನೀವು ಇದೆಲ್ಲವನ್ನೂ ಖಂಡಿಸಬಹುದು. ಆದರೆ ನಾವು ಎಲ್ಲಿ ಹೋಗಬೇಕು? ಆಡಳಿತಾತ್ಮಕ ಪಾತ್ರವನ್ನು ತೆಗೆದುಕೊಳ್ಳುತ್ತೇವೆ ಎಂದು ನಾವು ಎಲ್ಲಿ ಹೇಳಿದ್ದೇವೆ? ಎಂದು ಪ್ರಶ್ನಿಸಿದ ಸಿಜೆಐ ರಮಣ.
CJI NV Ramana, Justices DY Chandrachud and Surya Kant
CJI NV Ramana, Justices DY Chandrachud and Surya Kant

ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಿರುವುದರಿಂದ ಶಾಲೆಗಳನ್ನು ಮುಚ್ಚುವಂತೆ ಹೇಳಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳು ನಮ್ಮನ್ನು (ನ್ಯಾಯಮೂರ್ತಿಗಳನ್ನು) ಖಳನಾಯಕರು ಎಂಬ ರೀತಿಯಲ್ಲಿ ಬಿಂಬಿಸುತ್ತಿವೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ದೆಹಲಿಯಲ್ಲಿ ವಾಯು ಮಾಲಿನ್ಯ ವ್ಯಾಪಕವಾಗಿರುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಸೂರ್ಯಕಾಂತ್‌ ಅವರಿದ್ದ ತ್ರಿಸದಸ್ಯ ಪೀಠವು ನಡೆಸಿತು.

“ ನಮ್ಮ ಗಮನಕ್ಕೆ ಬಂದಿರುವಂತೆ ಉದ್ದೇಶಪೂರ್ವಕವಾಗಿಯೋ ಅಥವಾ ಮತ್ತಾವುದೋ ಕಾರಣಕ್ಕಾಗಿಯೋ ಶಾಲೆಗಳನ್ನು ಮುಚ್ಚುವಂತೆ ನಾವು ಆದೇಶಿಸಿದ್ದು, ನಾವು ಖಳನಾಯಕರು ಎಂಬಂತೆ ಕೆಲವು ಮಾಧ್ಯಮಗಳು ಬಿಂಬಿಸುತ್ತಿವೆ. ನಿಮ್ಮ ಇಚ್ಛೆಯಂತೆ ನೀವು (ದೆಹಲಿ ಸರ್ಕಾರ) ಶಾಲೆಗಳನ್ನು ಆರಂಭಿಸಿದ್ದೀರಿ… ಆದರೆ, ಇಂದಿನ ಪತ್ರಿಕೆಗಳನ್ನು ನೋಡಿ” ಎಂದು ಪೀಠವು ಬೇಸರಿಸಿತು.

ಇದಕ್ಕೆ ದೆಹಲಿ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು “ನನ್ನ ದೂರು ಸಹ ಅದೇ. ಯಾರಿಗೆ ಅದನ್ನು ರವಾನಿಸಬೇಕೋ ಅದನ್ನು ನೀವು ಮಾಡಬೇಕು. ಇಂದು ಪತ್ರಿಕೆಯೊಂದು ವಿಚಾರಣೆಯು ಆಕ್ರಮಣಕಾರಿಯಾಗಿದ್ದು, ನ್ಯಾಯಾಲಯವು ಆಡಳಿತಾಂಗದ ಕೆಲಸ ಕೈಗೆತ್ತಿಕೊಳ್ಳಲು ಮುಂದಾಗಿದೆ ಎನ್ನುವ ರೀತಿಯಲ್ಲಿ ಹೇಳಿದೆ” ಎಂದರು.

ಇದಕ್ಕೆ ಸಿಜೆಐ ರಮಣ ಅವರು “ಇದನ್ನು ನೀವು ಖಂಡಿಸಬಹುದು. ಆದರೆ, ನಾವೆಲ್ಲಿ ಹೋಗಬೇಕು? ಆಡಳಿತಾತ್ಮಕ ಪಾತ್ರವನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ನಾವು ಎಲ್ಲಿ ಹೇಳಿದ್ದೇವೆ?” ಎಂದರು.

ಮುಂದುವರಿದು, “ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಾವು ಮಧ್ಯಪ್ರವೇಶಿಸಲಾಗದು. ನೀವು ರಾಜಕೀಯ ಪಕ್ಷವನ್ನು ಪ್ರತಿನಿಧಿಸುತ್ತಿದ್ದು, ಸುದ್ದಿಗೋಷ್ಠಿ ನಡೆಸಬಹುದು. ಆದರೆ, ಅದನ್ನು ನಾವು ಮಾಡಲಾಗದು” ಎಂದರು.

Also Read
[ದೆಹಲಿ ವಾಯು ಮಾಲಿನ್ಯ] ಸರ್ಕಾರಗಳ ಉದ್ದೇಶ ಒಳ್ಳೆಯದು, ಆದರೆ ಜಾರಿ ಶೂನ್ಯ ಎಂದ ಸುಪ್ರೀಂ ಕೋರ್ಟ್

ಈ ಮಧ್ಯೆ, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು “ನ್ಯಾಯಾಂಗ ಮೂಲಸೌಕರ್ಯ ಪ್ರಕರಣದಲ್ಲಿ ನಾವು ರಾಷ್ಟ್ರೀಯ ಸಂಸ್ಥೆಯನ್ನು ಹೊಂದಿದರೆ ರಚನಾತ್ಮಕವಾಗಿ ಏನನ್ನಾದರೂ ಮಾಡಬಹುದು ಎಂದು ಸಲಹೆ ನೀಡಿದ್ದೆವು… ಆದರೆ, ನ್ಯಾಯಾಲಯದಲ್ಲಿ ನಾವು ಏನು ಹೇಳಿದ್ದೆವೋ ಅದನ್ನು ತಿರುಚಿ, ಹೈಕೋರ್ಟ್‌ಗಳು ಭಿಕ್ಷಾಪಾತ್ರೆ ಹಿಡಿದು ಹೋಗಬೇಕು ಎಂದು ಹೇಳಲಾಗಿತ್ತು… ಹಾಗೆಂದು ನಾವು ಯಾವಾಗ ಹೇಳಿದ್ದೇವೆ?” ಎಂದರು.

ಇದಕ್ಕೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “ನೀವು ಪತ್ರಿಕೆಗಳನ್ನು ಓದದಿದ್ದರೆ ಏನು ತಿಳಿದಿಲ್ಲದವರಾಗುತ್ತೀರಿ. ಅದೇ ಪತ್ರಿಕೆ ಓದಿದರೆ ತಪ್ಪು ತಿಳಿವಳಿಕೆಯವರಾಗುತ್ತೀರಿ ಎಂದು ಲೇಖಕ ಮಾರ್ಕ್‌ ಟ್ವೈನ್‌ ಹೇಳಿದ್ದಾನೆ” ಎಂದು ಮಾರ್ಮಿಕವಾಗಿ ನುಡಿದರು.

Related Stories

No stories found.
Kannada Bar & Bench
kannada.barandbench.com