

ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅಪಾಯಕಾರಿ ಮಟ್ಟದಲ್ಲಿ ಕುಸಿದಿರುವ ಹಿನ್ನೆಲೆಯಲ್ಲಿ ವಕೀಲರು ಮತ್ತು ದಾವೆದಾರರು ವಿಡಿಯೋ ಕಾನ್ಫರೆನ್ಸಿಂಗ್ ವಿಧಾನದ ಮೂಲಕ ಹಾಜರಾಗುವಂತೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಭಾನುವಾರ ಸುತ್ತೋಲೆ ಹೊರಡಿಸಿದೆ.
ಡಿಸೆಂಬರ್ 14ರ ಸುತ್ತೋಲೆಯಲ್ಲಿ ಸುಪ್ರೀಂ ಕೋರ್ಟ್ ಮುಂದೆ ಪಟ್ಟಿ ಮಾಡಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಕೀಲರು ಮತ್ತು ದಾವೆ ಹೂಡುವವರು ವಿಡಿಯೋ ಕಾನ್ಫರೆನ್ಸಿಂಗ್ ವಿಧಾನದ ಮೂಲಕ ಹಾಜರಾಗಬಹುದು ಎಂದು ಹೇಳಲಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರ ನಿರ್ದೇಶನದ ಮೇರೆಗೆ ಸಲಹೆ ನೀಡಲಾಗಿದ್ದು ವಕೀಲರು, ದಾವೆ ಹೂಡುವವರು ಅಥವಾ ಇತರೆ ಪಾಲುದಾರರಿಗೆ ಅನಾನುಕೂಲತೆ ಉಂಟಾಗದಂತೆ ನ್ಯಾಯಾಲಯ ಪ್ರಕ್ರಿಯೆಗಳನ್ನು ಸುಗಮ ಮತ್ತು ಸುರಕ್ಷಿತವಾಗಿ ನಡೆಸುವ ಗುರಿ ಸಲಹೆಯದ್ದಾಗಿದೆ.
ತಮ್ಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೈಬ್ರಿಡ್ ಇಲ್ಲವೇ ವೀಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯ ಬಳಸಿಕೊಳ್ಳುವಂತೆ ವಕೀಲರು ಮತ್ತು ಕಕ್ಷಿದಾರರಿಗೆ ರಿಜಿಸ್ಟ್ರಿ ಖುದ್ದು ವಿನಂತಿಸಿದೆ.
ಸುಪ್ರೀಂ ಕೋರ್ಟ್ ವಕೀಲರ ಸಂಘ, ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಸಂಘ ಹಾಗೂ ಇತರೆ ಅಧಿಕಾರಿಗಳಿಗೆ ಕೂಡ ಈ ಸಲಹೆ ನೀಡಲಾಗಿದೆ.