ಅರಣ್ಯನಾಶದ ಬಗ್ಗೆ ನಿರಾಸಕ್ತಿ ಮುಂದುವರಿದರೆ ದೆಹಲಿ ಒಣ ಮರುಭೂಮಿಯಾಗಲಿದೆ: ದೆಹಲಿ ಹೈಕೋರ್ಟ್

ಇತ್ತೀಚೆಗೆ ದೆಹಲಿಯಲ್ಲಿ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್‌ಗೆ ಏರಿರುವುದನ್ನು ಹೈಕೋರ್ಟ್ ಪರಿಗಣನೆಗೆ ತೆಗೆದುಕೊಂಡಿತು.
D
D

ದೆಹಲಿ ಅರಣ್ಯ ನಾಶದ ಬಗ್ಗೆ ಈಗಿನ ಪೀಳಿಗೆ ನಿರಾಸಕ್ತಿ ವಹಿಸಿದರೆ ನಗರ ಒಣ ಮರುಭೂಮಿಯಾಗಿ ಪರಿವರ್ತನೆಗೊಳ್ಳಬಹುದು ಎಂದು ದೆಹಲಿ ಹೈಕೋರ್ಟ್‌ ಈಚೆಗೆ ಹೇಳಿದೆ [ನೀರಜ್ ಶರ್ಮಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಇತ್ತೀಚೆಗೆ ದೆಹಲಿಯಲ್ಲಿ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್‌ಗೆ ಏರಿರುವುದನ್ನು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಪರಿಗಣಿಸುತ್ತಾ ಈ ವಿಚಾರ ತಿಳಿಸಿದರು.

ದೆಹಲಿಯಲ್ಲಿ 30.05.2024ರಂದು ಅಧಿಕೃತ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂಬ ಅಂಶವನ್ನು ನ್ಯಾಯಾಂಗದ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಇಂದಿನ ಪೀಳಿಗೆ ಅರಣ್ಯನಾಶದ ಬಗ್ಗೆ ನಿರಾಸಕ್ತಿ ಮುಂದುವರೆಸಿದರೆ, ಈ ನಗರವು ಒಣ ಮರುಭೂಮಿಯಾಗಿ  ಪರಿಣಮಿಸುವ ದಿನ  ದೂರವಿಲ್ಲ. ಕಟ್ಟುನಿಟ್ಟಾದ ಗಡುವಿನೊಳಗೆ ನ್ಯಾಯಾಲಯ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಅದು ಹೇಳಿದೆ.

ದೆಹಲಿಯಲ್ಲಿ ಅರಣ್ಯ  ರಕ್ಷಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ವಿಷಯ ತಿಳಿಸಿತು.

ಕಳೆದ ಏಪ್ರಿಲ್‌ನಲ್ಲಿ ಇದೇ ಅರ್ಜಿಗಳ ವಿಚಾರಣೆ ವೇಳೆ ನಿವೃತ್ತ ನ್ಯಾಯಮೂರ್ತಿ ನಜ್ಮಿ ವಜೀರಿ ಅವರನ್ನು ದೆಹಲಿ ಅರಣ್ಯ ಸಂರಕ್ಷಣೆ ಇಲಾಖಾ ಆಂತರಿಕ ಸಮಿತಿ ಮುಖ್ಯಸ್ಥರನ್ನಾಗಿ ನೇಮಿಸಿತ್ತು.

ನ್ಯಾಯಮೂರ್ತಿ ವಜೀರಿ ತಮ್ಮ ಹುದ್ದೆ ನಿರ್ವಹಿಸಲು ಅಗತ್ಯವಾದ ಮೂಲಸೌಕರ್ಯ,  ಸಿಬ್ಬಂದಿ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಹೈಕೋರ್ಟ್‌ಗೆ ತಿಳಿಸಲಾಯಿತು.

ಈ ಸೌಲಭ್ಯಗಳನ್ನು ತಾನು ಮುಂದಿನ ವಿಚಾರಣೆ ನಡೆಸಲಿರುವ ಜುಲೈ 29 ರೊಳಗೆ ಪರಿಗಣಿಸುವಂತೆ ಪೀಠ ಸರ್ಕಾರಕ್ಕೆ ಆದೇಶಿಸಿದೆ. ಜೊತೆಗೆ ಸೀಮಿತ ಅರ್ಥ ಕಲ್ಪಿಸುವ ಆಂತರಿಕ ಇಲಾಖಾ ಸಮಿತಿ ಎಂಬುದರ ಬದಲಿಗೆ ನ್ಯಾಯಾಲಯ ಸಮಿತಿಯನ್ನು ವಿಶೇಷಾಧಿಕಾರ ಸಮಿತಿ ಎಂದು ಮರುನಾಮಕರಣ ಮಾಡಿದೆ.

 ಸಭೆಗಳಿಗೆ ಹಾಜರಾಗುವಂತೆ ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಭೂಮಿ ಮತ್ತು ಅಭಿವೃದ್ಧಿ ಕಚೇರಿ, ಕೇಂದ್ರ ಲೋಕೋಪಯೋಗಿ ಇಲಾಖೆ ಮತ್ತು ದೆಹಲಿ ಕಂಟೋನ್ಮೆಂಟ್ ಸಮಿತಿಯ ಮಂಡಳಿಯ ಅಧಿಕಾರಿಗಳಿಗೆ ಅದು ಆದೇಶ ನೀಡಿದೆ.

Kannada Bar & Bench
kannada.barandbench.com