ಸಲಿಂಗ ವಿವಾಹ, ಸಲಿಂಗ ದಂಪತಿಯ ದತ್ತು ಮತ್ತು ಉತ್ತರಾಧಿಕಾರ ಹಕ್ಕುಗಳನ್ನು ಕಾನೂನುಬದ್ಧಗೊಳಿಸುವುದನ್ನು ಬೆಂಬಲಿಸಿ ದೆಹಲಿಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಡಿಸಿಪಿಸಿಆರ್) ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಸಲಿಂಗ ವಿವಾಹಕ್ಕೆ ಅನುಮತಿ ಕೋರಿ ಈಗಾಗಲೇ ಹಲವು ದಂಪತಿ ಸಲ್ಲಿಸಿರುವ ಅರ್ಜಿಗಳಿಗೆ ಬೆಂಬಲಿಸಿ, ಏಪ್ರಿಲ್ 3ರಂದು ಆಯೋಗವು ಮಧ್ಯಪ್ರವೇಶ ಅರ್ಜಿ ಸಲ್ಲಿಸಿದೆ.
ಭಿನ್ನ ಲಿಂಗಿಗಳ ಹೋಲಿಕೆಯಲ್ಲಿ ವಯಸ್ಕ ಸಲಿಂಗಿಗಳಿಗೆ ಸೂಕ್ತ ಕಾನೂನು ಹಕ್ಕುಗಳು ಇಲ್ಲದಿರುವುದು ಅದು ಅವರ ಮಾನಸಿಕ ಸಂಕೀರ್ಣತೆಯ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ ಅವರಲ್ಲಿ ಆತ್ಮಾಭಿಮಾನದ ಕೊರತೆ ಉಂಟು ಮಾಡುತ್ತದೆ ಅಲ್ಲದೆ ಇತರೆ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಸಹ ಇದು ಉಂಟು ಮಾಡಬಹುದು ಎಂದು ಡಿಸಿಪಿಸಿಆರ್ ಅರ್ಜಿಯಲ್ಲಿ ಹೇಳಲಾಗಿದೆ.
“ಸಲಿಂಗ ವ್ಯಕ್ತಿಗಳಿಗೆ ಸಮಾನ ಹಕ್ಕುಗಳನ್ನು ಕಲ್ಪಿಸದಿದ್ದರೆ, ಅವರನ್ನು ಒಪ್ಪಿಕೊಳ್ಳುವುದು, ಸಮಾಜದಲ್ಲಿ ಅವರು ಸಮ್ಮಿಳಿತಗೊಳ್ಳುವುದು ಮತ್ತು ಅಧಿಕೃತತೆ ಪಡೆಯುವುದು ಸಮಸ್ಯಾತ್ಮಕವಾಗಲಿದೆ. ಇದು ವಯಸ್ಕರ ಮೇಲೆ ಪರಿಣಾಮಗಳನ್ನು ಉಂಟು ಮಾಡಲಿದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಹೀಗಾಗಿ, ಸಲಿಂಗ ದಂಪತಿಗೆ ದತ್ತು, ಸಮಾನ ಹಕ್ಕುಗಳನ್ನು ಕಲ್ಪಿಸಬೇಕು ಎಂದು ಆಯೋಗವು ಆಗ್ರಹಿಸಿದ್ದು, ಈಗಾಗಲೇ ಇರುವ ಕಾನೂನು ಚೌಕಟ್ಟಿನ್ನಲ್ಲೇ ಸಲಿಂಗ ದಂಪತಿಯ ಹಕ್ಕುಗಳನ್ನು ಸೇರ್ಪಡೆ ಮಾಡಬಹುದಾಗಿದ ಎಂದು ಹೇಳಲಾಗಿದೆ.
ಸಲಿಂಗ ವಿವಾಹವನ್ನು ಪರಿಗಣಿಸದೇ ಇರುವುದು ಸರ್ಕಾರವು ಸಲಿಂಗಿಗಳಿಗೆ ಮಗುವಿನ ದ್ವಿಪಾಲಕತ್ವ ಮತ್ತು ಪೋಷಕತ್ವವನ್ನು ನಿರಾಕರಿಸಿದಂತಾಗಲಿದೆ. ಆ ಮೂಲಕ ಮಗುವಿಗೆ ಕಾನೂನುಬದ್ಧ ಕುಟುಂಬವನ್ನು ನಿರಾಕರಿಸಿದಂತಾಗುತ್ತದೆ, ಅಲ್ಲದೆ ಮುಂದೆ ಉತ್ತರಾಧಿಕಾರತ್ವದ ವೇಳೆಯೂ ಅನಗತ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ಅರ್ಜಿಯಲ್ಲಿ ಒತ್ತಿ ಹೇಳಲಾಗಿದೆ.
ಮಕ್ಕಳ ಮೇಲೆ ಪರಿಣಾಮ ಉಂಟು ಮಾಡಲಿದೆ. ಸಲಿಂಗಿಗಳ ವಿವಾಹವಕ್ಕೆ ಕಾನೂನು ಮಾನ್ಯತೆ ನಿರಾಕರಿಸುವ ಮೂಲಕ ಸರ್ಕಾರವು ಮಗುವಿನ ದ್ವಿ ಪೋಷಕತ್ವ ಮತ್ತು ರಕ್ಷಣೆಗೆ ಕಾನೂನು ರಕ್ಷಣೆ ನಿರಾಕರಿಸಿದಂತಾಗುತ್ತದೆ ಎಂದು ಹೇಳಲಾಗಿದೆ.