ಫೇರ್ ಅಂಡ್ ಹ್ಯಾಂಡ್ಸಮ್ ಕ್ರೀಮ್‌ನ ಪ್ರಯೋಗಾಲಯ ಪರೀಕ್ಷೆ: ಅರ್ಜಿ ತಿರಸ್ಕರಿಸಿದ ದೆಹಲಿ ಗ್ರಾಹಕ ನ್ಯಾಯಾಲಯ

ಉತ್ಪನ್ನದಲ್ಲಿ ತಿಳಿಸಿದಂತೆ ಬಳಸಿದರೂ ಕೂಡ ತನ್ನ ತ್ವಚೆ ಮೂರು ವಾರದೊಳಗೆ ಕಾಂತಿ ಪಡೆಯಲಿಲ್ಲ ಎಂದು ದೂರುದಾರರು ನ್ಯಾಯಾಲಯದ ಮೊರೆ ಹೋಗಿದ್ದರು.
Fair & Handsome cream
Fair & Handsome cream
Published on

ತ್ವಚೆಯ ಕಾಂತಿ ಪರೀಕ್ಷೆಗಾಗಿ ಇಮಾಮಿಯ ಫೇರ್ ಅಂಡ್ ಹ್ಯಾಂಡ್ಸಮ್ ಕ್ರೀಮ್‌ ಅನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ದೆಹೆಲಿಯಲ್ಲಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ನಿರಾಕರಿಸಿದೆ [ನಿಖಿಲ್‌ ಜೈನ್‌ ಮತ್ತು ಇಮಾಮಿ ಲಿಮಿಟೆಡ್‌ ನಡುವಣ ಪ್ರಕರಣ].

ಅಧ್ಯಕ್ಷ ಇಂದರ್ ಜೀತ್ ಸಿಂಗ್ ಮತ್ತು ಸದಸ್ಯರಾದ ಶಾಹಿನಾ, ವ್ಯಾಸ್ ಮುನಿ ರೈ ಅವರಿದ್ದ ವೇದಿಕೆ 2013ರ ಹಿಂದಿನ ಪ್ರಕರಣದ ವಿಚಾರಣೆ ನಡೆಸುತ್ತಿದ್ದು ʼಆ ವರ್ಷದ ಮಾದರಿ ಲಭ್ಯವಿಲ್ಲದೇ ಇರುವುದರಿಂದ ಅದನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲʼ ಎಂದಿತು.

"ಹೀಗಾಗಿ, ಈ ವರ್ಷ 2022ರ ಮಾರುಕಟ್ಟೆಯಿಂದ ಉತ್ಪನ್ನ ಪಡೆಯಲು ಯಾವುದೇ ಆದೇಶ ನೀಡಲಾಗದು ಅಥವಾ ಪ್ರಯೋಗಾಲಯ ಪರೀಕ್ಷೆಗೆ ಅವಕಾಶವಿಲ್ಲ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಉತ್ಪನ್ನದಲ್ಲಿ ತಿಳಿಸಿದಂತೆ ಬಳಸಿದರೂ ಕೂಡ ತನ್ನ ತ್ವಚೆ ಮೂರು ವಾರದೊಳಗೆ ಕಾಂತಿ ಪಡೆಯಲಿಲ್ಲ ಎಂದು ದೂರುದಾರರು ನ್ಯಾಯಾಲಯದ ಮೊರೆ ಹೋಗಿದ್ದರು.

Also Read
ಇಂಗ್ಲಿಷ್ ಸ್ಟೆನೋಗ್ರಾಫರ್ ಇಲ್ಲದ ಕಾರಣ ಆದೇಶ ನೀಡಲಾಗುತ್ತಿಲ್ಲ ಎಂದ ದೆಹಲಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ

ಅರ್ಜಿದಾರರ ಪರವಾಗಿ 2015 ರಲ್ಲಿ ತೀರ್ಪು ನೀಡಿದ್ದ ಜಿಲ್ಲಾ ವೇದಿಕೆ ಚರ್ಮದ ಕಪ್ಪು ಬಣ್ಣ ಬದಲಾಗುತ್ತದೆ ಎಂಬ ಜಾಹೀರಾತು ಹಿಂಪಡೆಯಬೇಕು, ಗ್ರಾಹಕರ ಕಲ್ಯಾಣ ನಿಧಿಗೆ ರೂ.15 ಲಕ್ಷ ದಂಡ ಪಾವತಿಸಬೇಕು ಎಂದು ಇಮಾಮಿಗೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಇಮಾಮಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಅರ್ಜಿ ಸಲ್ಲಿಸಿತ್ತು. ದಾಖಲೆಯಲ್ಲಿರುವ ಎಲ್ಲಾ ಸಾಕ್ಷ್ಯಗಳನ್ನು ಪರಿಗಣಿಸದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮತ್ತೆ ಜಿಲ್ಲಾ ವೇದಿಕೆಗೆ ಹಿಂತಿರುಗಿಸಿತ್ತು.

ಹೀಗೆ ಪ್ರಕರಣ ಮರಳಿಸುವ ವೇಳೆ ರಾಜ್ಯ ಆಯೋಗ “ಸ್ವಯಂ ಪ್ರಯೋಗದ ಅಫಿಡವಿಟ್‌ ಹೊರತುಪಡಿಸಿ ದೂರುದಾರರು ಯಾವುದೇ ತಜ್ಞರ ಸಾಕ್ಷ್ಯ ಒದಗಿಸಲು ವಿಫಲವಾಗಿದ್ದಾರೆ. ಅಲ್ಲದೆ ಉತ್ಪನ್ನವನ್ನು ವೇದಿಕೆಗೆ ಸಲ್ಲಿಸಿಲ್ಲ” ಎಂದಿತ್ತು.

ಜಿಲ್ಲಾ ವೇದಿಕೆ ಎದುರು ಪ್ರಕರಣದ ವಿಚಾರಣೆ ನಡೆದಾಗ, ದೂರುದಾರರು ಪ್ರಯೋಗಾಲಯ ಪರೀಕ್ಷೆ ಕೋರಿದರು. ಆದರೆ, ರಾಜ್ಯ ಆಯೋಗ ಯಾವುದೇ ಪರೀಕ್ಷೆಗೆ ಆದೇಶಿಸಿಲ್ಲ ಎಂಬ ಕಾರಣ ನೀಡಿ ಜಿಲ್ಲಾ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತು. ಇದೀಗ ಪ್ರಕರಣದ ಅರ್ಹತೆ ಆಧರಿಸಿ ಜನವರಿ 28ರಂದು ವೇದಿಕೆ ವಿಚಾರಣೆ ನಡೆಸಲಿದೆ.

Kannada Bar & Bench
kannada.barandbench.com