ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಲಾಲು ಪ್ರಸಾದ್ ಯಾದವ್, ಅವರ ಪುತ್ರರಾದ ತೇಜಸ್ವಿ ಯಾದವ್ ಹಾಗೂ ತೇಜ್ ಪ್ರತಾಪ್ ಯಾದವ್ ಅವರಿಗೆ ದೆಹಲಿ ರೌಸ್ ಅವೆನ್ಯೂ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.
ಜಾಮೀನು ಪಡೆದ ಮೂವರೂ ತಲಾ ₹ 1 ಲಕ್ಷ ಜಾಮೀನು ಬಾಂಡ್ ಸಲ್ಲಿಸಬೇಕು ಎಂದು ಸೂಚಿಸಿರುವ ನ್ಯಾಯಾಲಯ ಅಕ್ಟೋಬರ್ 25 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಸಲಿದೆ.
ಕಳೆದ ತಿಂಗಳು ನಡೆದ ವಿಚಾರಣೆ ವೇಳೆ ಲಾಲೂ ಮತ್ತು ಅವರ ಪುತ್ರರಿಗೆ ಸಮನ್ಸ್ ನೀಡಿದ್ದ ನ್ಯಾಯಾಲಯ 2004 ರಿಂದ 2009 ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಸರ್ಕಾರಿ ಉದ್ಯೋಗ ಒದಗಿಸುವಂತಹ ಅಧಿಕಾರದಲ್ಲಿದ್ದರು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿರುವುದಾಗಿ ತಿಳಿಸಿತ್ತು.
ಲಾಲುಪ್ರಸಾದ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ತಮ್ಮ ಕುಟುಂಬದ ಹೆಸರಿಗೆ ಭೂಮಿ ವರ್ಗಾಯಿಸಿಕೊಂಡು ರೈಲ್ವೆಯಲ್ಲಿ ನೇಮಕಾತಿ ಮಾಡಿದ್ದಾರೆ ಎಂದು ಆರೋಪಿಸಲಾದ ಪ್ರಕರಣ ಇದಾಗಿದೆ.
ಆದರೆ ಈ ನೇಮಕಾತಿ ಆಗಿನ ರೈಲ್ವೆ ನೇಮಕಾತಿ ಭಾರತೀಯ ರೈಲ್ವೆಯ ಮಾನದಂಡಗಳಿಗೆ ಅನುಗುಣವಾಗಿ ಇಲ್ಲ ಎಂದು ಸಿಬಿಐ ದೂರಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಲಾಲು ಯಾದವ್, ಪತ್ನಿ ರಾಬ್ಡಿ ದೇವಿ ಹಾಗೂ ಮಗಳು ಮಿಸಾ ಭಾರತಿ ಅವರಿಗೆ ಜಾಮೀನು ನೀಡಿತ್ತು.