ಪುರಾವೆ ನೀಡದ ಸಿಬಿಐ: ಆಪ್‌ ಮುಖಂಡ ಸತ್ಯೇಂದರ್ ಜೈನ್ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಅಂತ್ಯ

ಲೋಕೋಪಯೋಗಿ ಇಲಾಖೆಗೆ ಕನ್ಸಲ್ಟೆಂಟ್‌ಗಳನ್ನು ನೇಮಕ ಮಾಡಿಕೊಳ್ಳುವಾಗ ಭ್ರಷ್ಟಾಚಾರ ನಡೆದಿದೆ ಎಂದು ದೆಹಲಿ ಸರ್ಕಾರದ ವಿಚಕ್ಷಣಾ ದಳ ಆರೋಪಿಸಿದ್ದ ಹಿನ್ನೆಲೆಯಲ್ಲಿ ಜೈನ್ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
Satyendar Jain
Satyendar Jain Facebook
Published on

ಸಿಬಿಐಗೆ ಪುರಾವೆ ಒದಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ  ಆಮ್‌ ಆದ್ಮಿ ಪಕ್ಷದ ನಾಯಕ ಸತ್ಯೇಂದರ್‌ ಜೈನ್‌ ಅವರು ಆರೋಪಿಯಾಗಿದ್ದ ಲೋಕೋಪಯೋಗಿ ಇಲಾಖೆಗೆ ಕನ್ಸಲ್ಟೆಂಟ್‌ಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣವನ್ನು ದೆಹಲಿ ನ್ಯಾಯಾಲಯ ಸೋಮವಾರ ಮುಕ್ತಾಯಗೊಳಿಸಿದೆ [ಸಿಬಿಐ ಮತ್ತು ಸತ್ಯೇಂದ್ರ ಜೈನ್‌ ಇನ್ನಿತರರ ನಡುವಣ ಪ್ರಕರಣ].

ನಾಲ್ಕು ವರ್ಷ ತನಿಖೆ ನಡೆಸಿದ್ದರೂ ಜೈನ್‌  ಭ್ರಷ್ಟಾಚಾರ ಎಸಗಿದ್ದಾರೆ ಎನ್ನುವುದನ್ನು ಸಾಬೀತುಪಡಿಸುವ ಪುರಾವೆಗಳನ್ನು ಸಿಬಿಐ ಒದಗಿಸಿಲ್ಲ ಎಂದು ತಿಳಿಸಿದ ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭಷ್ಟಾಚಾರ ತಡೆ ಕಾಯಿದೆಯಡಿ ರೂಪುಗೊಂಡ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದಿಗ್‌ ವಿನಯ್‌ ಸಿಂಗ್ ಅವರು ಸಿಬಿಐ ಸಲ್ಲಿಸಿದ್ದ ಮುಕ್ತಾಯ ವರದಿ ಅಂಗೀಕರಿಸಿದರು.

ಕ್ರಿಮಿನಲ್ ಪಿತೂರಿ ನಡೆದಿತ್ತು ಎನ್ನುವುದನ್ನು ಹೇಳುವ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಪೀಠ ನುಡಿದಿದೆ.

“ಮಾಡಲಾದ ಆರೋಪಗಳು ಮತ್ತು ವಾಸ್ತವಾಂಶಗಳ ಹಿನ್ನೆಲೆಯು ಹೆಚ್ಚಿನ ತನಿಖೆ ಅಗತ್ಯವಿದೆ ಎಂಬುದನ್ನು ಸಮರ್ಥಿಸಲು ಅಥವಾ ವಿಚಾರಣೆ ಪ್ರಾರಂಭಿಸಲು ಸಾಕಾಗುವುದಿಲ್ಲ. ಶಂಕೆ ಎಂಬುದು ಪುರಾವೆಯ ಸ್ಥಾನ ತುಂಬುವುದಿಲ್ಲ ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಯಾರ ಮೇಲಾದರೂ ಆರೋಪ ಹೊರಿಸಲು ಕೂಡ ಅನುಮಾನ ಮಾತ್ರವೇ ಸಾಲದು ಎಂಬುದು ಗಮನಿಸಬೇಕಾದ ಅಂಶವಾಗಿದ್ದು ತನಿಖೆ ನಡೆಸಲು ಕನಿಷ್ಠ ಬಲವಾದ ಶಂಕೆ ಅಗತ್ಯವಿದೆ” ಎಂದ ನ್ಯಾಯಾಲಯ ಪ್ರಕರಣ ಮುಕ್ತಾಯಗೊಳಿಸಿತು.

 ಜೈನ್ ಅವರು ದೆಹಲಿ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಸಚಿವರಾಗಿದ್ದಾಗ, ಪ್ರಮಾಣಿತ ಸರ್ಕಾರಿ ನೇಮಕಾತಿ ಕಾರ್ಯವಿಧಾನಗಳನ್ನು ನಿರ್ಲಕ್ಷಿಸಿ, ಹೊರಗುತ್ತಿಗೆ ಮೂಲಕ ಲೋಕೋಪಯೋಗಿ ಇಲಾಖೆಗೆ 17 ಕನ್ಸಲ್ಟೆಂಟ್‌ಗಳ ತಂಡವನ್ನು ನೇಮಿಸಿಕೊಳ್ಳಲು ಅನುಮೋದನೆ ನೀಡಿದ್ದರು ಎಂದು ಆರೋಪಿಸಲಾಗಿತ್ತು.

ವಿಚಕ್ಷಣಾ ಇಲಾಖೆಯು ನೀಡಿದ ದೂರಿನ ಆಧಾರದ ಮೇಲೆ ಜೈನ್ ವಿರುದ್ಧ ಮೇ 2019ರಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ನಾಲ್ಕು ವರ್ಷಗಳ ತನಿಖೆಯ ನಂತರ, ತುರ್ತು ಇಲಾಖಾ ಅಗತ್ಯಗಳಿಂದಾಗಿ ವೃತ್ತಿಪರರ ನೇಮಕ ಅಗತ್ಯವಾಗಿತ್ತು. ಜೊತೆಗೆ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕ ಮತ್ತು ಸ್ಪರ್ಧಾತ್ಮಕವಾಗಿತ್ತು ಎಂದು ಸಿಬಿಐ ಕಂಡುಕೊಂಡಿದೆ. ಭ್ರಷ್ಟಾಚಾರ, ಕ್ರಿಮಿನಲ್ ಪಿತೂರಿ, ಅನಗತ್ಯ ಅನುಗ್ರಹ ಅಥವಾ ವೈಯಕ್ತಿಕ ಲಾಭದ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಸಂಸ್ಥೆ ಹೇಳಿದೆ.

ಈ ಹಿನ್ನೆಲೆಯಲ್ಲಿ ಪ್ರಕರಣ ಮುಕ್ತಾಯಗೊಳಿಸಿದ ಪೀಠ ಯಾರ ವಿರುದ್ಧವಾದರೂ ಹೊಸ ಸಾಕ್ಷ್ಯಗಳು ದೊರೆತರೆ, ಆ ಬಗ್ಗೆ ಮತ್ತಷ್ಟು ತನಿಖೆ ನಡೆಸಲು ಸಿಬಿಐಗೆ ಸ್ವಾತಂತ್ರ್ಯವಿದೆ ಎಂದು ಹೇಳಿತು.

Kannada Bar & Bench
kannada.barandbench.com