ದೆಹಲಿ ಅಬಕಾರಿ ನೀತಿ: ಸಿಬಿಐ ಮತ್ತು ಇ ಡಿ ಪ್ರಕರಣಗಳೆರಡರಲ್ಲೂ ಮನೀಶ್ ಸಿಸೋಡಿಯಾಗೆ ದೆಹಲಿ ನ್ಯಾಯಾಲಯ ಜಾಮೀನು ನಿರಾಕರಣೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 26, 2023 ರಂದು ಸಿಸೋಡಿಯಾ ಅವರನ್ನು ಬಂಧಿಸಲಾಗಿತ್ತು. ವಿಚಾರಣಾ ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿರುವುದು ಇದು ಎರಡನೇ ಬಾರಿ.
Manish sisodia
Manish sisodia

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಜಾಮೀನು ನಿರಾಕರಿಸಿದೆ.

ಸಿಸೋಡಿಯಾ ಅವರು  ಸಿಬಿಐ ಮತ್ತು  ಇ ಡಿ ಹೂಡಿದ್ದ ಎರಡೂ ಪ್ರಕರಣಗಳಲ್ಲಿ ಜಾಮೀನು ಕೋರಿದ್ದರು. ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಎರಡೂ ಪ್ರಕರಣಗಳ ಜಾಮೀನು ಅರ್ಜಿಯನ್ನು ಇಂದು ತಿರಸ್ಕರಿಸಿದರು, ವಿವರವಾದ ಆದೇಶದ ಪ್ರತಿ ಇನ್ನಷ್ಟೇ ದೊರೆಯಬೇಕಿದೆ.

ಫೆಬ್ರವರಿ 26, 2023 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಬಂಧಿಸಲಾಗಿತ್ತು. ವಿಚಾರಣಾ ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿರುವುದು ಇದು ಎರಡನೇ ಬಾರಿ.

ಸಿಬಿಐ ಪ್ರಕರಣದಲ್ಲಿ ಅವರ ಮೊದಲ ಜಾಮೀನು ಅರ್ಜಿಯನ್ನು ಮಾರ್ಚ್ 31, 2023ರಂದು ತಿರಸ್ಕರಿಸಲಾಗಿತ್ತು. ಏಪ್ರಿಲ್ 28 ರಂದು ವಿಚಾರಣಾ ನ್ಯಾಯಾಲಯ ಇ ಡಿ ಪ್ರಕರಣದಲ್ಲಿ ಅವರ ಜಾಮೀನು ಅರ್ಜಿ ತಿರಸ್ಕರಿಸಿತು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಎಪಿ ನಾಯಕ ಸಂಜಯ್ ಸಿಂಗ್, ಎಎಪಿ ಸಂವಹನ ಮುಖ್ಯಸ್ಥ ವಿಜಯ್ ನಾಯರ್ ಮತ್ತು ಭಾರತ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಸೇರಿದಂತೆ ಅನೇಕರನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿದೆ.

ಕೇಜ್ರಿವಾಲ್ ಮತ್ತು ಕವಿತಾ ಪ್ರಸ್ತುತ ಜೈಲಿನಲ್ಲಿದ್ದರೆ, ಸಂಜಯ್ ಸಿಂಗ್ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

Related Stories

No stories found.
Kannada Bar & Bench
kannada.barandbench.com