ದೆಹಲಿ ಗಲಭೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
ಕಡ್‌ಕಡ್‌ಡೂಮ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯಿ ಅವರು ಖಾಲಿದ್ ಅವರ ಮನವಿ ವಜಾಗೊಳಿಸಿದರು. ವಿವರವಾದ ಆದೇಶದ ಪ್ರತಿ ಇನ್ನಷ್ಟೇ ದೊರೆಯಬೇಕಿದೆ.
ಬದಲಾದ ಸನ್ನಿವೇಶ ಉಲ್ಲೇಖಿಸಿ ಫೆಬ್ರವರಿ 14, 2024ರಂದು ಸುಪ್ರೀಂ ಕೋರ್ಟ್‌ನಿಂದ ಜಾಮೀನು ಅರ್ಜಿ ಹಿಂಪಡೆದಿದ್ದ ಖಾಲಿದ್ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಫೆಬ್ರವರಿ 14ರಂದು ಈ ಪ್ರಕರಣದ ವಿಚಾರಣೆ ನಡೆಸಬೇಕಿತ್ತು. ಆಗ ಖಾಲಿದ್ ಪರ ವಕೀಲ ಕಪಿಲ್ ಸಿಬಲ್ ಅವರು ಜಾಮೀನು ಅರ್ಜಿ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದ್ದರು.
ಖಾಲಿದ್ ಅವರನ್ನು ಸೆಪ್ಟೆಂಬರ್ 2020ರಲ್ಲಿ ಬಂಧಿಸಲಾಗಿತ್ತು. ಕ್ರಿಮಿನಲ್ ಪಿತೂರಿ, ಗಲಭೆ, ಕಾನೂನುಬಾಹಿರ ಸಭೆ ಜೊತೆಗೆ ಅಕ್ರಮ ಚಟುವಟಿಕೆಗಳ ತಡ ಕಾಯಿದೆ (ಯುಎಪಿಎ) ಅಡಿಯಲ್ಲಿ ವಿವಿಧ ಆರೋಪ ಹೊರಿಸಲಾಗಿತ್ತು. ಅಂದಿನಿಂದ ಅವರು ಜೈಲಿನಲ್ಲಿದ್ದಾರೆ.
ವಿಚಾರಣಾ ನ್ಯಾಯಾಲಯ 2022ರ ಮಾರ್ಚ್‌ನಲ್ಲಿ ಖಾಲಿದ್‌ಗೆ ಮೊದಲ ಬಾರಿಗೆ ಜಾಮೀನು ನಿರಾಕರಿಸಿತ್ತು. ನಂತರ ಹೈಕೋರ್ಟ್‌ನಲ್ಲಿಯೂ ಪರಿಹಾರ ಪಡೆಯಲು ವಿಫಲರಾಗಿದ್ದ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 2023ರಲ್ಲಿ, ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರ ಪ್ರತಿಕ್ರಿಯೆ ಕೇಳಿತ್ತು. ನಂತರ ಅವರ ಮನವಿಯನ್ನು ಸುಪ್ರೀಂ ಕೋರ್ಟ್ 14 ಬಾರಿ ಮುಂದೂಡಿತ್ತು.