Sharjeel Imam
Sharjeel Imam

ರಾಷ್ಟ್ರದ್ರೋಹ ಪ್ರಕರಣ: ಶಾರ್ಜೀಲ್‌ ಇಮಾಮ್‌ ಮಧ್ಯಂತರ ಜಾಮೀನು ಮನವಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ಇಮಾಮ್‌ ಅವರ ಸಾಮಾನ್ಯ ಜಾಮೀನು ಮನವಿಯನ್ನು ಇದಾಗಲೇ ನ್ಯಾಯಾಲಯ ತಿರಸ್ಕರಿಸಿರುವುದರಿಂದ ಮಧ್ಯಂತರ ಜಾಮೀನು ನೀಡಲಾಗದು ಎಂದು ಪೀಠ ಹೇಳಿದೆ.
Published on

ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ದ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರದ್ರೋಹ ಪ್ರಕರಣ ಎದುರಿಸುತ್ತಿರುವ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಶಾರ್ಜೀಲ್‌ ಇಮಾಮ್‌ ಅವರ ಜಾಮೀನು ಮನವಿಯನ್ನು ಶನಿವಾರ ದೆಹಲಿ ನ್ಯಾಯಾಲಯವು ತಿರಸ್ಕರಿಸಿದೆ.

ಇಮಾಮ್‌ ಅವರ ಸಾಮಾನ್ಯ ಜಾಮೀನು ಮನವಿಯನ್ನು ಈಗಾಗಲೇ ನ್ಯಾಯಾಲಯ ತಿರಸ್ಕರಿಸಿರುವುದರಿಂದ ಮಧ್ಯಂತರ ಜಾಮೀನು ನೀಡಲಾಗದು ಎಂದು ಹೆಚ್ಚುವರಿ ಸತ್ರ ನ್ಯಾಯಾಧೀಶ ಅಮಿತಾಭ್‌ ರಾವತ್‌ ಅವರು ಆದೇಶದಲ್ಲಿ ಹೇಳಿದ್ದಾರೆ.

ರಾಷ್ಟ್ರದ್ರೋಹ (124A IPC) ಪ್ರಕರಣದ ಅಡಿಯ ಆರೋಪಗಳ ಬಾಕಿ ವಿಚಾರಣೆಯನ್ನು ತಡೆಹಿಡಿಯಲಾಗಿದೆ, ಆದಾಗ್ಯೂ ಆರೋಪಿಯ ಮೇಲೆ ಯಾವುದೇ ಪೂರ್ವಾಗ್ರಹವಾಗುವುದಿಲ್ಲ ಎನ್ನುವುದು ಖಚಿತವಾದಲ್ಲಿ ಇತರೆ ಸೆಕ್ಷನ್‌ಗಳ ಅಡಿಯ ಪ್ರಕರಣಗಳ ನಿರ್ಣಯ ಪ್ರಕ್ರಿಯೆ ಮುಂದುವರಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.

Also Read
ದೇಶದ್ರೋಹ ಪ್ರಕರಣ: ಜಾಮೀನಿಗಾಗಿ ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಶಾರ್ಜಿಲ್‌ಗೆ ಸೂಚಿಸಿದ ದೆಹಲಿ ಹೈಕೋರ್ಟ್

2019ರ ಡಿಸೆಂಬರ್‌ 13ರಂದು ಇಮಾಮ್‌ ಅವರು ಜಾಮೀಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣವು ಕೋಮು/ವಿಭನಕಾರಿಯಾಗಿದ್ದು, ಅದು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವಂತಿತ್ತು ಎಂದು ಹೇಳಿ 2021ರ ಅಕ್ಟೋಬರ್‌ನಲ್ಲಿ ಹೆಚ್ಚುವರಿ ಸತ್ರ ನ್ಯಾಯಾಧೀಶರಾದ ಅನೂಜ್‌ ಅಗರ್ವಾಲ್‌ ಅವರು ಜಾಮೀನು ನೀಡಲು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಇಮಾಮ್‌ ಅವರು ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಈ ಮನವಿ ಬಾಕಿ ಇರುವಾಗಲೇ ಮೇ 11ರಂದು ಸುಪ್ರೀಂ ಕೋರ್ಟ್‌ ದೇಶಾದ್ಯಂತ ರಾಷ್ಟ್ರದ್ರೋಹ ಪ್ರಕರಣಗಳಿಗೆ ಸಂಬಂಧಿಸಿದ ಮೇಲ್ಮನವಿ, ಪ್ರಕ್ರಿಯೆಯನ್ನು ಅಮಾನತಿನಲ್ಲಿಡುವಂತೆ ಮಹತ್ವದ ಆದೇಶ ಮಾಡಿತ್ತು. ಹೀಗಾಗಿ, ಮಧ್ಯಂತರ ಜಾಮೀನು ನೀಡುವಂತೆ ಕೋರಿ ಇಮಾಮ್‌ ಅವರು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ದೆಹಲಿ ಹೈಕೋರ್ಟ್‌ ಅವರನ್ನು ಅಧೀನ ನ್ಯಾಯಾಲಯಕ್ಕೆ ಹೋಗುವಂತೆ ಹೇಳಿತ್ತು. ಈಗ ಅಧೀನ ನ್ಯಾಯಾಲಯ ಜಾಮೀನು ಮನವಿ ತಿರಸ್ಕರಿಸಿದೆ.

Kannada Bar & Bench
kannada.barandbench.com