ಹಿರಿಯ ವಕೀಲ ಮೆಹ್ಮೂದ್ ಪ್ರಾಚಾ ಅವರ ಕಚೇರಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ತೆಗೆದಿದ್ದ ವೀಡಿಯೊವನ್ನು ಸಂರಕ್ಷಿಸಿಡಬೇಕು ಎಂದು ದೆಹಲಿ ಪೊಲೀಸರಿಗೆ ಅಲ್ಲಿನ ನ್ಯಾಯಾಲಯವೊಂದು ನಿರ್ದೇಶನ ನೀಡಿದೆ.
ಪಟಿಯಾಲ ಹೌಸ್ ಕೋರ್ಟ್‌ನ ಡ್ಯೂಟಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಉದ್ಭವ್ ಕುಮಾರ್ ಜೈನ್, ಅವರು ಪ್ರಾಚಾ ಅವರಿಗೆ ವೀಡಿಯೊ ತುಣುಕನ್ನು ನೀಡಬೇಕೆ ಎಂಬ ಕುರಿತ ವಿಚಾರವನ್ನು ಸಂಬಂಧಿತ ನ್ಯಾಯಾಲಯ ಸೂಕ್ತ ಹಂತದಲ್ಲಿ ನಿರ್ಧರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
“ಈ ಹಂತದಲ್ಲಿ, ವೀಡಿಯೊ ತುಣುಕನ್ನು ಸಂರಕ್ಷಿಸಲು ಮಾತ್ರ ನಿರ್ದೇಶನ ಅಗತ್ಯ ಎಂದು ಪರಿಗಣಿಸಲಾಗಿದೆ. ಸೂಕ್ತ ಹಂತದಲ್ಲಿ ಅರ್ಜಿದಾರರಿಗೆ (ಪ್ರಾಚಾ) ವೀಡಿಯೊ ತುಣುಕನ್ನು ಪೂರೈಸುವ ಸಂಬಂಧ ಸಂಬಂಧಪಟ್ಟ ನ್ಯಾಯಾಲಯ ನಿರ್ಣಯ ಕೈಗೊಳ್ಳಬಹುದು ಎಂದು ಅದು ಹೇಳಿದೆ.
“ಶೋಧದ ಸಂಪೂರ್ಣ ವಿಡಿಯೋ ತುಣುಕನ್ನು ಈ ನ್ಯಾಯಾಲಯದ ಮುದ್ರೆಯೊಂದಿಗೆ ಸಂರಕ್ಷಿಸಿಡಬೇಕು ಮತ್ತು ಮುಂದಿನ ಆದೇಶ ಪಡೆಯಲು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಅದನ್ನು ಹಾಜರುಪಡಿಸಬೇಕು”ಎಂದು ಹೇಳಿರುವ ನ್ಯಾಯಾಲಯ ಪ್ರಕರಣವನ್ನು ಜನವರಿ 5ಕ್ಕೆ ಮುಂದೂಡಿದೆ.
ಸಿಎಎ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸಿ ಬಂಧಿತರಾಗಿದ್ದವರ ಪರ ಕಾನೂನಾತ್ಮಕ ಹೋರಾಟ ನಡೆಸುತ್ತಿದ್ದ ಹಿರಿಯ ವಕೀಲ ಮೆಹ್ಮೂದ್ ಪ್ರಾಚಾ ಅವರ ಕಚೇರಿ ಮೇಲೆ ದೆಹಲಿ ಪೊಲೀಸರು ಗುರುವಾರ ದಾಳಿ ನಡೆಸಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ
ಘಟನೆ ಸಂಬಂಧ ತಕ್ಷಣ ಕ್ರಮ ಕೈಗೊಳ್ಳುವಂತೆ ದೆಹಲಿ ವಕೀಲರ ಪರಿಷತ್ತು (ಬಿಸಿಡಿ) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದೆ. ದಾಳಿಯಿಂದ ನ್ಯಾಯಿಕ ವರ್ಗದಲ್ಲಿ ದುಃಖ ಮತ್ತು ಕೋಪ ಉಂಟಾಗಿದೆ. ಏಕೆಂದರೆ ಮೂಲತಃ ಇದು ಸಂವಿಧಾನದತ್ತವಾಗಿ ಹಾಗೂ 1961ರ ವಕೀಲರ ಕಾಯಿದೆ, ಭಾರತೀಯ ವಕೀಲರ ಪರಿಷತ್ತಿನ ನಿಯಮಾವಳಿಗಳ ಮೂಲಕ ಕರ್ತವ್ಯ ನಿರ್ವಹಿಸುವ ವಕೀಲರಿಗೆ ದೊರೆತಿರುವ ಅವಕಾಶವನ್ನೇ ಪ್ರಶ್ನಿಸುತ್ತದೆ ಎಂದು ಅದು ಹೇಳಿದೆ.
"ವಿಸ್ತೃತವಾದ ತಿಳಿವಳಿಕೆ ಏನೆಂದರೆ ನ್ಯಾಯ ವಿತರಣಾ ವ್ಯವಸ್ಥೆಯ ಎರಡು ರೆಕ್ಕೆಗಳ ನಡುವೆ ಸಾಮರಸ್ಯ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವುದಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಇದನ್ನು ಅನುಸರಿಸಲಾಗಿಲ್ಲ ಎಂದು ತೋರುತ್ತದೆ. ಈ ವಿಷಯದ ವಿವಿಧ ಆಯಾಮಗಳನ್ನು ಪ್ರಶ್ನಿಸಲು ನಾವು ಬಯಸುವುದಿಲ್ಲವಾದರೂ, ಸ್ಪಷ್ಟವಾಗಿ ದೆಹಲಿ ಪೊಲೀಸರು ಕೈಗೊಂಡ ಕ್ರಮ ಕಾನೂನು ಸಮುದಾಯಕ್ಕೆ ಸಂಬಂಧಿಸಿದ ಗಂಭೀರ ವಿಚಾರ” ಎಂದು ಪತ್ರದಲ್ಲಿ ತಿಳಿಸಲಾಗಿದೆ.