ದೆಹಲಿ ಗಲಭೆ: ಇಶ್ರತ್, ಖಾಲಿದ್ ಸೇರಿ 11 ಮಂದಿ ವಿರುದ್ಧ ಕೊಲೆ ಯತ್ನ, ಗಲಭೆ ಆರೋಪ ನಿಗದಿ

ಆರೋಪಿಗಳ ವಿರುದ್ಧದ ಕ್ರಿಮಿನಲ್‌ ಪಿತೂರಿಯ ಅಪವಾದ ತಾರ್ಕಿಕತೆಯನ್ನು ಸಂಪೂರ್ಣ ಕಳೆದುಕೊಂಡಿದೆ ಎಂದು ಪೀಠ ತಿಳಿಸಿದೆಯಾದರೂ ಮೇಲ್ನೋಟಕ್ಕೆ ಅವರು ಪೊಲೀಸ್‌ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಗಲಭೆಕೋರ ಸಶಸ್ತ್ರ ಗುಂಪಿನ ಭಾಗವಾಗಿದ್ದಾರೆ ಎಂದಿದೆ.
ದೆಹಲಿ ಗಲಭೆ ಮತ್ತು ಕಡ್‌ಕಡ್‌ಡೂಮ ನ್ಯಾಯಾಲಯ
ದೆಹಲಿ ಗಲಭೆ ಮತ್ತು ಕಡ್‌ಕಡ್‌ಡೂಮ ನ್ಯಾಯಾಲಯ
Published on

ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಮಾಜಿ ಪಾಲಿಕೆ ಸದಸ್ಯೆ ಇಶ್ರತ್‌ ಜಹಾನ್‌, ಸಾಮಾಜಿಕ ಹೋರಾಟಗಾರ ಖಾಲಿದ್‌ ಸೈಫಿ ಹಾಗೂ ಉಳಿದ ಹನ್ನೊಂದು ಮಂದಿ ವಿರುದ್ಧ ದೆಹಲಿ ನ್ಯಾಯಾಲಯ ಇತ್ತೀಚೆಗೆ ಕೊಲೆ ಯತ್ನ ಮತ್ತು ಗಲಭೆಯ  ಆರೋಪಗಳನ್ನು ದಾಖಲಿಸಿಕೊಂಡಿದೆ.

ಆದರೆ ಕ್ರಿಮಿನಲ್‌ ಪಿತೂರಿ ಮತ್ತು ಅಕ್ರಮ ಬಂದೂಕು ಬಳಕೆ ಅಪರಾಧಗಳಿಂದ ಆರೋಪಿಗಳನ್ನು ಕಡಕಡ್‌ಡೂಮ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಅಮಿತಾಭ್ ರಾವತ್ ಖುಲಾಸೆಗೊಳಿಸಿದರು.

ಆರೋಪಿಗಳ ವಿರುದ್ಧದ ಕ್ರಿಮಿನಲ್‌ ಪಿತೂರಿಯ ಅಪವಾದ ತಾರ್ಕಿಕತೆಯನ್ನು ಸಂಪೂರ್ಣ ಕಳೆದುಕೊಂಡಿದೆ ಎಂದು ಪೀಠ ನಿರ್ಧರಿಸಿತು. ಆದರೆ ಮೇಲ್ನೋಟಕ್ಕೆ ಅವರು ಪೊಲೀಸ್‌ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಗಲಭೆಕೋರ ಸಶಸ್ತ್ರ ಗುಂಪಿನ ಭಾಗವಾಗಿದ್ದಾರೆ ಎಂದು ಅದು ನುಡಿಯಿತು.

ಇಶ್ರತ್ ಜಹಾನ್, ಖಾಲಿದ್ ಸೈಫಿ, ವಿಕ್ರಮ್ ಪ್ರತಾಪ್, ಸಮೀರ್ ಅನ್ಸಾರಿ ಅಲಿಯಾಸ್‌ ಸಮೀಮ್, ಮೊಹಮ್ಮದ್. ಸಲೀಂ ಅಲಿಯಾಸ್‌ ಸಮೀರ್ ಪ್ರಧಾನ್, ಸಾಬು ಅನ್ಸಾರಿ, ಇಕ್ಬಾಲ್ ಅಹ್ಮದ್, ಅನ್ಜಾರ್ ಅಲಿಯಾಸ್‌ ಭೂರಾ, ಮೊಹಮ್ಮದ್. ಇಲ್ಯಾಸ್, ಮೊಹಮ್ಮದ್. ಬಿಲಾಲ್ ಸೈಫಿ ಅಲಿಯಾಸ್‌ ಲಂಬಾ, ಸಲೀಮ್ ಅಹ್ಮದ್ ಅಲಿಯಾಸ್‌ ಸಲೀಮ್ ಅಲಿಯಾಸ್‌ ಗುಂಡಾ, ಮೊಹಮ್ಮದ್ ಯಾಮೀನ್ ಅಲಿಯಾಸ್‌ ಯಮೀನ್ ಕೂಲರ್ವಾಲಾ ಹಾಗೂ ಶರೀಫ್ ಖಾನ್ ಅಲಿಯಾಸ್‌ ಶರೀಫ್ ಖುರೇಜಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಈ ಕೆಳಗಿನ ಸೆಕ್ಷನ್‌ಗಳಡಿ ಆರೋಪ ನಿಗದಿಪಡಿಸಲಾಗಿದೆ:

  • ಸೆಕ್ಷನ್ 147 - ಗಲಭೆ

  • ಸೆಕ್ಷನ್ 148 - ಮಾರಕಾಸ್ತ್ರಗಳೊಂದಿಗೆ ಗಲಭೆ

  • ಸೆಕ್ಷನ್ 186 - ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿ

  • ಸೆಕ್ಷನ್ 188 - ಸಾರ್ವಜನಿಕ ಸೇವಕರು ಘೋಷಿಸಿದ ಆದೇಶಕ್ಕೆ ಅಸಹಕಾರ

  • ಸೆಕ್ಷನ್ 332 - ಸಾರ್ವಜನಿಕ ಸೇವಕ ಕರ್ತವ್ಯ ನಿರ್ವಹಿಸದಂತೆ ತಡೆಯಲು ಸ್ವಯಂಪ್ರೇರಿತವಾಗಿ ಘಾಸಿಗೊಳಿಸುವುದು

  • ಸೆಕ್ಷನ್ 353 - ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯ ನಿರ್ವಹಿಸದಂತೆ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ

  • ಸೆಕ್ಷನ್ 307 - ಕೊಲೆ ಯತ್ನ

ಐಪಿಸಿ ಮತ್ತು ಶಸ್ತ್ರಾಸ್ತ್ರ ಕಾಯಿದೆಯ ಉಳಿದ ಸೆಕ್ಷನ್‌ಗಳಡಿಯ ಆರೋಪಗಳಿಂದ ಅವರನ್ನು ಮುಕ್ತಗೊಳಿಸಲಾಗಿದೆ. ಪ್ರತಿಭಟನೆಯ ಸಮಯದಲ್ಲಿ ಬಳಸಲಾಗಿದೆ ಎಂದು ಹೇಳಲಾದ ಬಂದೂಕನ್ನು ಬಾಲಾಪರಾಧಿ ಮಾತ್ರ ಹೊಂದಿದ್ದ ಎಂದು ನ್ಯಾಯಾಲಯ ತಿಳಿಸಿದೆ.

ಆದರೆ, ಉಳಿದ ಆರೋಪಗಳಿಗೆ ಸಂಬಂಧಿಸಿದಂತೆ, ದೂರುದಾರ ಮತ್ತು ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿರುವ ಹೆಡ್ ಕಾನ್ಸ್ಟೇಬಲ್ ಯೋಗರಾಜ್ ಅವರು ಎಲ್ಲಾ ಆರೋಪಿಗಳು ಕಾನೂನುಬಾಹಿರ ಸಭೆಯ ಭಾಗವಾಗಿದ್ದರು ಎಂದು ಸ್ಪಷ್ಟವಾಗಿ ಗುರುತಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. 

ಕಾನೂನುಬಾಹಿರ ಸಭೆಯ ಭಾಗವಾಗಿದ್ದ ಒಬ್ಬ ಬಾಲಾಪರಾಧಿ ಪೊಲೀಸ್ ಅಧಿಕಾರಿಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆದರೂ, ಗುಂಡಿನ ದಾಳಿಯ ನಿಖರ ಸಮಯದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

ಐಪಿಸಿಯ ಸೆಕ್ಷನ್ 120-ಬಿ ಅಡಿಯಲ್ಲಿ ಮಾಡಲಾದ ಕ್ರಿಮಿನಲ್ ಪಿತೂರಿ ಆರೋಪ ತನಿಖಾಧಿಕಾರಿಯ ʼಕಪೋಲ ಕಲ್ಪಿತʼ ಘಟನೆ ಎಂದಿದ್ದು ಈ ಕಲ್ಪನೆಯನ್ನು ಬೇರೆ ಯಾವುದೋ ಪ್ರಕರಣದಿಂದ ಎರವಲು ಪಡೆದಿರಬಹುದು ಎಂದು ಚಾಟಿ ಬೀಸಿದೆ.

ಆರೋಪಿಗಳು ದೆಹಲಿಯ ಕಡ್‌ಕಡ್‌ಡೂಮ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಲಿದ್ದಾರೆ.

ನ್ಯಾಯಾಧೀಶ ಅಮಿತಾಭ್ ರಾವತ್ ಅವರನ್ನು ರೌಸ್‌ ಅವೆನ್ಯೂ ಜಿಲ್ಲಾ ನ್ಯಾಯಾಲಯಗಳಿಗೆ ವರ್ಗಾಯಿಸುವ ಮೊದಲು ಆರೋಪಗಳನ್ನು ರೂಪಿಸುವ ಅಂಶದ ಬಗ್ಗೆ ಆದೇಶ ಕಾಯ್ದಿರಿಸಿದ್ದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
State v. Isharat Jahan & Others.pdf
Preview
Kannada Bar & Bench
kannada.barandbench.com