ಭಯೋತ್ಪಾದಕ ಸಂಘಟನೆಗಳನ್ನು ಸೇರಲು ಜನರನ್ನು ಪ್ರೇರೇಪಿಸಿದ ಮತ್ತು ಭಾರತದ ವಿರುದ್ಧ ಸಮರ ಸಾರಿದ ಪ್ರಕರಣಗಳಲ್ಲಿ ಇಂಡಿಯನ್ ಮುಜಾಹಿದ್ದೀನ್ (ಐಎಂ) ಸಹ-ಸಂಸ್ಥಾಪಕ ಯಾಸಿನ್ ಭಟ್ಕಳ್ ಹಾಗೂ 10 ಮಂದಿ ಇತರರ ವಿರುದ್ಧ ದೆಹಲಿ ನ್ಯಾಯಾಲಯ ಶುಕ್ರವಾರ ಭಯೋತ್ಪಾದನೆ ಆರೋಪ ನಿಗದಿಗೊಳಿಸಿದೆ.
ಭಟ್ಕಳ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಸೆಕ್ಷನ್‌ಗಳಾದ 18, 18 ಎ, 18 ಬಿ, 21, 38 (2), 39 (2), 40 (2) ಹಾಗೂ ಐಪಿಸಿ ಸೆಕ್ಷನ್‌ಗಳಾದ 121 ಮತ್ತು 122ರ ಅಡಿಯಲ್ಲಿ ಪಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಎಎಸ್‌ಜೆ) ಶೈಲೇಂದರ್ ಮಲಿಕ್ ಆರೋಪ ನಿಗದಿಪಡಿಸಿದರು.
ಇತರ ಆರೋಪಿಗಳೊಡನೆ ಭಟ್ಕಳ್ ಭಯೋತ್ಪಾದಕ ಚಟುವಟಿಕೆಗಳೊಂದಿಗೆ ಭಾಗಿಯಾಗಿರುವುದಲ್ಲದೆ ಭವಿಷ್ಯದ ಭಯೋತ್ಪಾದಕ ಚಟುವಟಿಕೆಗಳ ಸಲುವಾಗಿ ನೇಪಾಳದ ಮಾವೋವಾದಿಗಳ ಸಹಾಯದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸುವ ಸಂಚಿನಲ್ಲಿ ಭಾಗವಹಿಸಿದ್ದಾಗಿ ನ್ಯಾಯಾಧೀಶ ಮಲಿಕ್ ಅವರ ಆದೇಶದಲ್ಲಿ ತಿಳಿಸಲಾಗಿದೆ.
“ಸಾಕ್ಷಿಗಳ ಹೇಳಿಕೆ ಆಧರಿಸಿ, ಭಯೋತ್ಪಾದನೆ ಸೃಷ್ಟಿಸುವ ಮತ್ತು ಒಟ್ಟಾರೆ ಸಮಾಜವನ್ನು ಅಸ್ಥಿರಗೊಳಿಸಲು ಉಗ್ರ ಚಟುಯವಟಿಕೆಗಳನ್ನು ಮಾಡುವ ವಿಸ್ತೃತ ಪಿತೂರಿಯಲ್ಲಿ ಆರೋಪಿ -6 (ಭಟ್ಕಳ್) ತೊಡಗಿಸಿಕೊಂಡಿದ್ದಾನೆ” ಎಂದು ನ್ಯಾಯಾಲಯ ಹೇಳಿದೆ.
ಸೂರತ್‌ನಲ್ಲಿ ಪರಮಾಣು ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದಕ್ಕೆ ಸಂಬಂಧಿಸಿದಂತೆ ಭಟ್ಕಳ್ ಮತ್ತು ಮತ್ತೊಬ್ಬ ಆರೋಪಿ ನಡುವಿನ ಸಂಭಾಷಣೆಯನ್ನು ಸಹ ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಅಂತಹ ಒಂದು ಕೃತ್ಯವನ್ನು ಎಸಗುವುದಕ್ಕೂ ಮುನ್ನ ಸೂರತ್‌ನಲ್ಲಿನ ಮುಸ್ಲಿಮರನ್ನು ಸುರಕ್ಷಿತವಾಗಿ ಹೊರಕಳುಹಿಸುವ ಬಗ್ಗೆ ಚರ್ಚಿಸಿರುವುದನ್ನೂ ಆದೇಶದಲ್ಲಿ ದಾಖಲಿಸಲಾಗಿದೆ.
ನ್ಯಾಯಾಲಯ ಆರೋಪ ನಿಗದಿಪಡಿಸಿದ ಇತರೆ ಹತ್ತು ಮಂದಿಯ ವಿವರ ಹೀಗಿದೆ: ಮಹಮದ್ ಡ್ಯಾನಿಷ್ ಅನ್ಸಾರಿ @ ಅಬ್ದುಲ್ ವಹಾಬ್ @ ಸಲೀಮ್ @ ಅಬ್ದುಲ್ಲಾ, ಮೊಹಮ್ಮದ್. ಅಫ್ತಾಬ್ ಆಲಂ @ ಫಾರೂಕ್ @ ಶೇಖ್ಚಿಲ್ಲಿ @ ಹಫೀಜ್ ಜಿ, ಇಮ್ರಾನ್ ಖಾನ್ @ ಜಕಾರಿಯಾ @ ಸಲೀಮ್ @ ಫಜಲ್ @ ತಬ್ರೇಜ್ @ ರಾಜ್ @ ಪಟೇಲ್, ಸೈಯದ್ ಮಕ್ಬೂಲ್ @ ಜುಬೇರ್, ಒಬೈದ್ ಉರ್ ರೆಹಮಾನ್, ಅಸಾದುಲ್ಲಾ ಅಖ್ತರ್ @ ಹಡ್ಡಿ @ ಡೇನಿಯಲ್ @ ತಬ್ರೇಜ್, ಉಜಿರ್, ಅಸದ್. ತೆಹ್ಸಿನ್ ಅಖ್ತರ್ @ ಮೋನು @ ಹಸನ್, ಹೈದರ್ ಅಲಿ @ ಅಬ್ದುಲ್ಲಾ @ ಬ್ಲ್ಯಾಕ್ ಬ್ಯೂಟಿ ಮತ್ತು ಜಿಯಾ ಉರ್ ರೆಹಮಾನ್ @ ವಕಾಸ್ @ ಜಾವೇದ್. ಮಂಜರ್ ಇಮಾಮ್ @ ಜಮಿಲ್ @ ಅಬ್ಬು ಹನೀಫಾ, ಅರಿಜ್ ಖಾನ್ @ ಜುನೈದ್ ಮತ್ತು ಅಬ್ದುಲ್ ವಾಹಿದ್ ಸಿದ್ದಿಬಪ್ಪ @ ಅಬ್ದುಲ್ ವಾಹಿದ್ @ ಖಾನ್.
ಭಯೋತ್ಪಾದಕ ಗುಂಪಿನ ಸದಸ್ಯರಾಗಿ ಭಾರತದ ವಿರುದ್ಧ ಯುದ್ಧ ಮಾಡಲು ಕ್ರಿಮಿನಲ್ ಸಂಚು ರೂಪಿಸಿದ್ದಕ್ಕಾಗಿ ಭಟ್ಕಳ್ ಮತ್ತಿತರರ ವಿರುದ್ಧ ಎನ್‌ಐಎ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪ ನಿಗದಿಪಡಿಸಿದೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]