ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಸೂಕ್ಷ್ಮ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮಾಜಿ ಅಧಿಕಾರಿಯೊಬ್ಬರಿಗೆ ದೆಹಲಿಯ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. [ಎನ್ಐಎ ಮತ್ತು ಅರವಿಂದ್ ನೇಗಿ ನಡುವಣ ಪ್ರಕರಣ].
ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ (ಎಸ್‌ಪಿ) ಅರವಿಂದ್ ನೇಗಿ ಅವರ ವಿರುದ್ಧ ಎನ್‌ಐಎ ಸಂಗ್ರಹಿಸಿದ ಸಾಕ್ಷ್ಯವು ಡಾಕ್ಯುಮೆಂಟರಿ ಸ್ವರೂಪದ್ದಾಗಿದೆ ಎಂದ ಎನ್‌ಐಎ ವಿಶೇಷ ನ್ಯಾಯಾಧೀಶ ಪರ್ವೀನ್ ಸಿಂಗ್, ₹ 1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಆಧಾರದಲ್ಲಿ ಜಾಮೀನು ಮಂಜೂರು ಮಾಡಿದರು.
ನೇಗಿ ಅವರು ಸಾಕ್ಷ್ಯಗಳನ್ನು ತಿರುಚುವ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಎನ್‌ಐಎ ಕಳವಳಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗದು ಎಂದು ಹೇಳಿತು.
ಹುರಿಯತ್ ಭಯೋತ್ಪಾದನೆ ನಿಧಿ ಪ್ರಕರಣದ ತನಿಖೆಗಾಗಿ ಈ ಹಿಂದೆ ರಾಷ್ಟ್ರಪತಿಗಳ ಪೊಲೀಸ್ ಪದಕ ಪಡೆದಿದ್ದ ನೇಗಿ ಅವರು, ಸೋರಿಕೆಯಾದ ದಾಖಲೆಗಳು ಅಧಿಕೃತ ರಹಸ್ಯ ಕಾಯಿದೆಯಡಿ ಬರುವುದಿಲ್ಲ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದರು. ಆದರೆ ಪ್ರತಿವಾದ ಮಂಡಿಸಿದ್ದ ಎನ್‌ಐಎ, ನೇಗಿ ಅವರು ಮಾಹಿತಿ ಸೋರಿಕೆಯಲ್ಲಿ ಗಣನೀಯ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿತ್ತು.
ಐಪಿಸಿ ಸೆಕ್ಷನ್ 201 (ಸಾಕ್ಷ್ಯ ಕಣ್ಮರೆ) ಅಡಿಯಲ್ಲಿ ನೇಗಿ ಅವರ ವಿರುದ್ಧ ಮಾಡಲಾದ ಆರೋಪ ಜಾಮೀನು ಪಡೆಯಬಹುದಾದ ಅಪರಾಧ ಎಂದು ನ್ಯಾಯಾಲಯ ಒತ್ತಿಹೇಳಿತು. ನೇಗಿ ಪೂರ್ವಾನುಮತಿ ಇಲ್ಲದೆ ದೇಶ ತೊರೆಯುವಂತಿಲ್ಲ, ಸಾಕ್ಷ್ಯ ತಿರುಚುವಂತಿಲ್ಲ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಿಲ್ಲ ಎಂಬ ಷರತ್ತುಗಳನ್ನು ಆಧರಿಸಿ ನ್ಯಾಯಾಲಯ ನೇಗಿ ಅವರಿಗೆ ಜಾಮೀನು ನೀಡಿತು.