ವಂಚನೆ ಪ್ರಕರಣ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಮಧ್ಯಂತರ ಜಾಮೀನು ನೀಡಿದ ದೆಹಲಿ ನ್ಯಾಯಾಲಯ
ವಂಚನೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಪ್ರಮುಖ ಆರೋಪಿಯಾಗಿರುವ ₹200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ದೆಹಲಿ ನ್ಯಾಯಾಲಯ ಸೋಮವಾರ ಮಧ್ಯಂತರ ಜಾಮೀನು ನೀಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ವೇಳೆ ನಟಿಯನ್ನು ಬಂಧಿಸಿರಲಿಲ್ಲ ಎಂದು ಆಕೆಯ ಪರ ವಕೀಲರಾದ ಪ್ರಶಾಂತ್ ಪಾಟೀಲ್ ಮತ್ತು ಅಮನ್ ನಂದ್ರಜೋಗ್ ಅವರು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರಿಗೆ ತಿಳಿಸಿದರು. ಅಂತಿಮವಾಗಿ ನಟಿಗೆ ನ್ಯಾಯಾಲಯವು ₹ 50,000 ಬಾಂಡ್ ಮೊತ್ತದ ಮಧ್ಯಂತರ ಜಾಮೀನು ನೀಡಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 17 ರಂದು ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಪೂರಕ ಆರೋಪ ಪಟ್ಟಿ ಆಧರಿಸಿ ಆಗಸ್ಟ್ 31 ರಂದು ನ್ಯಾಯಾಲಯ ಜಾಕ್ವೆಲಿನ್ ಅವರಿಗೆ ಸಮನ್ಸ್ ನೀಡಿತ್ತು. ನಂತರ ಇಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಟಿಗೆ ಸೂಚಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಆರೋಪಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯ ಇತ್ತೀಚೆಗಷ್ಟೇ ಆಕೆಯ ಹೆಸರು ಪ್ರಸ್ತಾಪಿಸಿತ್ತು.
ತನ್ನ ಪಾಸ್‌ಪೋರ್ಟ್ ಮರಳಿಸುವಂತೆ ಕೋರಿ ಜಾಕ್ವೆಲಿನ್ ಅವರು ಸಲ್ಲಿಸಿದ್ದ ಮತ್ತೊಂದು ಅರ್ಜಿಯಲ್ಲಿ, 2009 ರಿಂದ ತಾನು ಭಾರತದಲ್ಲಿ ವಾಸಿಸುತ್ತಿದ್ದು ಭಾರತೀಯ ಚಲನಚಿತ್ರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದಾಗಿ ಹೇಳಿದ್ದರು. ಪ್ರಕರಣದಲ್ಲಿ ತನಿಖಾ ಸಂಸ್ಥೆ ತನ್ನನ್ನು ಆರೋಪಿ ಎಂದು ಹೆಸರಿಸದಿದ್ದರೂ ವಿನಾ ಕಾರಣ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗಿದೆ ಎಂದು ದೂರಿದ್ದರು.


