Nikita Jacob, Patiala House Court
Nikita Jacob, Patiala House Court

ಟೂಲ್‌ಕಿಟ್‌ ಪ್ರಕರಣ: ನಿಕಿತಾ, ಶಂತನು ವಿರುದ್ಧ ಕ್ರಮಕೈಗೊಳ್ಳದಂತೆ ಮಧ್ಯಂತರ ರಕ್ಷಣೆ ನೀಡಿದ ದೆಹಲಿ ನ್ಯಾಯಾಲಯ

ಆರೋಪಿಗಳಾದ ನಿಕಿತಾ ಜೇಕಬ್‌ ಮತ್ತು ಶಂತನು ಮುಲುಕ್‌ ಅವರ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆಯನ್ನು ಮಾರ್ಚ್‌ 15ಕ್ಕೆ ದೆಹಲಿ ನ್ಯಾಯಾಲಯ ನಿಗದಿಗೊಳಿಸಿದೆ.
Published on

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿರುವ ಟೂಲ್‌ಕಿಟ್‌ ಪ್ರಕರಣದಲ್ಲಿ ಪರಿಸರ ಕಾರ್ಯಕರ್ತರಾದ ನಿಕಿತಾ ಜೇಕಬ್‌ ಮತ್ತು ಶಂತನು ಮುಲುಕ್‌ ವಿರುದ್ಧ‌ ಯಾವುದೇ ತೆರನಾದ ಒತ್ತಾಯಪೂರ್ವಕ ಕ್ರಮಕ್ಕೆ ಮುಂದಾಗದಂತೆ ಸೂಚಿಸಿ ದೆಹಲಿ ನ್ಯಾಯಾಲಯವು ಅವರಿಗೆ ಮಧ್ಯಂತರ ಪರಿಹಾರ ಕಲ್ಪಿಸಿದೆ.

ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆಯನ್ನು ಮಾರ್ಚ್‌ 15ಕ್ಕೆ ನಿಗದಿಗೊಳಿಸಿರುವ ಪಟಿಯಾಲ ಹೌಸ್‌ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು “ಈ ಅವಧಿಯಲ್ಲಿ ಆರೋಪಿಗಳ ವಿರುದ್ಧ ಯಾವುದೇ ತೆರನಾದ ಒತ್ತಾಯಪೂರ್ವಕ ಕ್ರಮ ಕೈಗೊಳ್ಳಬಾರದು” ಎಂದು ಹೇಳಿದ್ದಾರೆ.

ವಾದ ಮಂಡಿಸಲು ಎರಡು ನಿರೀಕ್ಷಣಾ ಜಾಮೀನು ಮನವಿಗಳನ್ನು ಇಂದು ನಿಗದಿಗೊಳಿಸಲಾಗಿತ್ತು. ಆದರೆ, ಮುಲುಕ್ ಮತ್ತು ಜೇಕಬ್‌ ಪರ ವಕೀಲರು ವಿಚಾರಣೆ ಮುಂದೂಡುವಂತೆ ಕೋರಿದರು. ದೆಹಲಿ ಪೊಲೀಸರು ಸಲ್ಲಿಸಿರುವ ಪ್ರತ್ಯುತ್ತರ ಪರಿಶೀಲಿಸಲು ಕಾಲಾವಕಾಶದ ಅಗತ್ಯವಿದೆ ಎಂದು ಮುಲುಕ್‌ ಪರ ವಕೀಲೆ ವೃಂದಾ ಗ್ರೋವರ್‌ ಹೇಳಿದರು.

Also Read
ನಿಕಿತಾ ಜೇಕಬ್ ಜಾಮೀನು ಅರ್ಜಿ: ಸಮಗ್ರ ಪ್ರತಿಕ್ರಿಯೆ ನೀಡಲು ಪೊಲೀಸರಿಗೆ ಸಮಯಾವಕಾಶ ಒದಗಿಸಿದ ದೆಹಲಿ ನ್ಯಾಯಾಲಯ

ಗ್ರೋವರ್‌ ವಾದ ಮಂಡಿಸುವ ದಿನವೇ ತಾನೂ ವಾದಿಸುವುದಾಗಿ ನಿಕಿತಾ ಜೇಕಬ್‌ ಪರ ಹಿರಿಯ ವಕೀಲೆ ರೆಬೆಕಾ ಜಾನ್‌ ಹೇಳಿದರು. ವಿಚಾರಣೆ ಮುಂದೂಡುವಂತೆ ಕೋರಿದ್ದ ಮನವಿಗೆ ಪ್ರಾಸಿಕ್ಯೂಷನ್‌ ಪರ ಹೆಚ್ಚುವರಿ ಸರ್ಕಾರಿ ಅಭಿಯೋಜಕರಾದ ಅತುಲ್‌ ಶ್ರೀವಾಸ್ತವ್‌ ಮತ್ತು ಇರ್ಫಾನ್‌ ಅಹ್ಮದ್‌ ಅವರು ತಕರಾರು ಎತ್ತಲಿಲ್ಲ.

ಇದಕ್ಕೂ ಮುನ್ನ ಮಾರ್ಚ್‌ 9ರ ವರೆಗೆ ಶಂತನು ಅವರ ಮಧ್ಯಂತರ ರಕ್ಷಣೆಯನ್ನು ಪೀಠ ವಿಸ್ತರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಿಕಿತಾ ಜೇಕಬ್‌ ಅವರನ್ನು ಬಂಧಿಸದಂತೆ ಫೆಬ್ರವರಿ 17ರಂದು ಬಾಂಬೆ ಹೈಕೋರ್ಟ್‌ ಅವರಿಗೆ ಮೂರು ವಾರಗಳ ರಕ್ಷಣೆ ನೀಡಿತ್ತು. ಇದೇ ಪ್ರಕರಣದಲ್ಲಿ ಆರೋಪಿಯಾದ ದಿಶಾ ರವಿ ಅವರಿಗೆ ನ್ಯಾಯಾಲಯವು ಜಾಮೀನು ನೀಡಿದೆ.

Kannada Bar & Bench
kannada.barandbench.com