ಕೇಂದ್ರ ಸಚಿವ ಶೇಖಾವತ್ ಹೂಡಿದ್ದ ಮಾನನಷ್ಟ ಮೊಕದ್ದಮೆ: ರಾಜಸ್ಥಾನ ಸಿಎಂ ಗೆಹ್ಲೋಟ್‌ಗೆ ದೆಹಲಿ ನ್ಯಾಯಾಲಯ ಸಮನ್ಸ್

ಸಂಜೀವನಿ ಹಗರಣದಲ್ಲಿ ಕೇಂದ್ರ ಸಚಿವರು ಭಾಗಿಯಾಗಿದ್ದಾರೆ ಎಂದು ಅಶೋಕ್ ಗೆಹ್ಲೋಟ್ ಆರೋಪಿಸಿದ್ದರು.
Ashok Gehlot and Gajendra Singh Shekhawat
Ashok Gehlot and Gajendra Singh Shekhawat

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಗುರುವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಆಗಸ್ಟ್ 7ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಗೆಹ್ಲೋಟ್ ಅವರಿಗೆ  ರೌಸ್‌ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರು ಆದೇಶಿಸಿದ್ದಾರೆ. ಆದೇಶದ ವಿವರಗಳು ಇನ್ನಷ್ಟೇ ದೊರೆಯಬೇಕಿದೆ.

ಸಂಜೀವನಿ ಹಗರಣದಲ್ಲಿ ಶೇಖಾವತ್‌ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಗೆಹ್ಲೋಟ್‌ ಅವರು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಸಂಜೀವನಿಯಲ್ಲಿ ಹೂಡಿಕೆ ಹಣ ಕಳೆದುಕೊಂಡ ಕೆಲವರನ್ನು ಭೇಟಿಯಾದ ನಂತರ 2023ರ ಫೆಬ್ರವರಿಯಲ್ಲಿ ಗೆಹ್ಲೋಟ್ ಅವರು ತಮ್ಮ ವಿರುದ್ಧ ಮಾನಹಾನಿಕರ ಆರೋಪ ಮಾಡಿದ್ದಾರೆ ಎಂದು ಶೇಖಾವತ್ ತಮ್ಮ ಮನವಿಯಲ್ಲಿ ಆರೋಪಿಸಿದ್ದರು. ಶೇಖಾವತ್ ಅವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹಣ ಕಳೆದುಕೊಂಡವರು ಆರೋಪಿಸಿದ್ದರು.

ಮರುದಿನವೇ ಸುದ್ದಿಗೋಷ್ಠಿ ನಡೆಸಿದ್ದ ಶೇಖಾವತ್‌ ಆರೋಪಗಳನ್ನು ಅಲ್ಲಗಳೆದಿದ್ದರು. ಶೇಖಾವತ್‌ ಹಗರಣದ ಆರೋಪಿ ಎಂದು ಹೇಳಿದ್ದಾರೋ ಇಲ್ಲವೋ ಎಂದು ತನಿಖೆ ನಡಸುವಂತೆ ಮಾರ್ಚ್ 24, 2023ರಂದು ದೆಹಲಿ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿತ್ತು. ಅದರನ್ವಯ ದೆಹಲಿ ಪೊಲೀಸರು ವರದಿ ಸಲ್ಲಿಸಿದ್ದರು. ಶೇಖಾವತ್‌ ಪರ ವಕೀಲರು ನ್ಯಾಯಾಲಯವು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ವರದಿಯಲ್ಲಿ ಸಕಾರಾತ್ಮಕ ಉತ್ತರವನ್ನುನೀಡಲಾಗಿದೆ ಎಂದು ವಾದಿಸಿದ್ದರು.

Kannada Bar & Bench
kannada.barandbench.com