ರಿಪಬ್ಲಿಕ್ ಮಾದ್ಯಮವು ತಪ್ಪು ವರದಿ ಪ್ರಕಟಿಸುವ ಹಾಗೂ ಭಿತ್ತರಿಸುವ ಮೂಲಕ ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸಿದೆ ಎಂದು ಆರೋಪಿಸಿ ಪಾಪ್ಯುಪಲ್ ಫ್ರಂಟ್ ಆಫ್ ಇಂಡಿಯಾ ಸಲ್ಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ, ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಸಂಪಾದಕಿ ಅನನ್ಯಾ ವರ್ಮಾ ಅವರಿಗೆ ದೆಹಲಿ ನ್ಯಾಯಾಲಯವು ಗುರುವಾರ ಸಮನ್ಸ್ ಜಾರಿ ಮಾಡಿದೆ.
ದೆಹಲಿಯ ಸಾಕೇತ್ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶೀತಲ್ ಚೌಧರಿ ಪ್ರಧಾನ್ ಅವರು ಸಮನ್ಸ್ ಜಾರಿಗೊಳಿಸಿ ಪ್ರಕರಣವನ್ನು ಜನವರಿ 3ಕ್ಕೆ ಮುಂದೂಡಿದ್ದಾರೆ.
ತಪ್ಪು ಸುದ್ದಿ ಪ್ರಕಟಿಸಿದ್ದಕ್ಕೆ ಸಂಬಂಧಿಸಿದಂತೆ ₹1 ಲಕ್ಷ ಪರಿಹಾರ ಪಾವತಿಸಲು ಆದೇಶಿಸಿಬೇಕು. ಇನ್ನು ಮುಂದೆ ರಿಪಬ್ಲಿಕ್ ಟಿವಿ ಚಾನೆಲ್ ಅಥವಾ ವೆಬ್‌ಸೈಟ್‌ನಲ್ಲಿ ಫಿರ್ಯಾದುದಾರರ ವರ್ಚಸ್ಸಿಗೆ ಧಕ್ಕೆ ತರುವಂಥ ಯಾವುದೇ ಸುದ್ದಿ ಪ್ರಕಟಿಸದಂತೆ ಶಾಶ್ವತವಾಗಿ ಕಡ್ಡಾಯ ಪ್ರತಿಬಂಧಕಾದೇಶ ಹೊರಡಿಸಬೇಕು ಎಂದು ಪಿಎಫ್‌ಐ ಮನವಿಯಲ್ಲಿ ಕೋರಲಾಗಿದೆ.
ನ್ಯೂಸ್ ಬ್ರಾಡ್‌ಕಾಸ್ಟ್ ಸ್ಟ್ಯಾಂಡರ್ಡ್ಸ್ ಅಸೋಸಿಯೇಷನ್ ಅನ್ನು ಫಿರ್ಯಾದುದಾರರು ಪ್ರತಿವಾದಿಯಾಗಿಸಲಾಗಿದ್ದು, ರಿಪಬ್ಲಿಕ್ ಟಿವಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಅಸ್ಸಾಂನ ದರ್ರಾಂಗ್ ದಾಳಿಗೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಎರಡು ವರದಿಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ʼದರ್ರಾಂಗ್‌ನಲ್ಲಿ ದಾಳಿ: ಪ್ರತಿಭಟನೆಗೆ ಜನರನ್ನು ಸೇರಿಸಿದ್ದ ಪಿಎಫ್‌ಐ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಇಬ್ಬರ ಬಂಧನʼ ಎಂಬ ವರದಿಯನ್ನು ರಿಪಬ್ಲಿಕ್ ಟಿವಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅದೇ ವರದಿಯನ್ನು ರಿಪಬ್ಲಿಕ್ ಟಿವಿಯಲ್ಲಿ ʼಅಸ್ಸಾಂ ದಾಳಿ ತನಿಖೆ: ಇಬ್ಬರು ಪಿಎಫ್‌ಐ ಕಾರ್ಯಕರ್ತರ ಬಂಧನʼ ಎಂಬ ಹೆಸರಿನಲ್ಲಿ ಪ್ರಸಾರ ಮಾಡಲಾಗಿದೆ ಎಂದು ಹೇಳಲಾಗಿದೆ.
“ಜನರನ್ನು ಪ್ರಚೋದಿಸುವ ಮತ್ತು ಪಿಎಫ್‌ಐ ವಿರುದ್ಧ ಪೂರ್ವಾಗ್ರಹ ಸೃಷ್ಟಿಸುವ, ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿ ಫಿರ್ಯಾದುದಾರರ ಪರವಾದ ಸದ್ಭಾವನೆಯನ್ನು ಹಾಳು ಮಾಡುವ ಉದ್ದೇಶದಿಂದ ಪ್ರತಿವಾದಿ ಸಂಸ್ಥೆಯು ವೆಬ್‌ಸೈಟ್ ಮತ್ತು ಟಿವಿಯಲ್ಲಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.
ದರ್ರಾಂಗ್ ಪ್ರಕರಣದಲ್ಲಿ ಬಂಧಿತರಾಗಿರುವ ಮೊಹಮ್ಮದ್ ಅಸ್ಮತ್ ಅಲಿ ಮತ್ತು ಮೊಹಮ್ಮದ್ ಚಾಂದ್ ಮಮೂದ್ ಅವರು ಪಿಎಫ್‌ಐ ಜೊತೆ ಸಂಪರ್ಕ ಹೊಂದಿಲ್ಲ ಮತ್ತು ಅವರು ಯಾವುದೇ ರೀತಿಯಲ್ಲಿಯೂ ಪಿಎಫ್‌ಐ ಜೊತೆ ಗುರುತಿಸಿಕೊಂಡಿಲ್ಲ ಎಂದು ಹೇಳಲಾಗಿದೆ. ಸುದ್ದಿ ಪ್ರಕಟಿಸುವಾಗ ಯಾವುದೇ ತನಿಖೆ ಅಥವಾ ಪರಿಶೀಲನೆ ಮಾಡಲಾಗಿಲ್ಲ ಎಂದು ಪಿಎಫ್‌ಐ ತಕರಾರು ಎತ್ತಿದೆ.
ಆರೋಪಿತರು ಸ್ಥಳೀಯ ಪಂಚಾಯತ್ ನಾಯಕರಾಗಿದ್ದು, ಪಿಎಫ್‌ಐ ಜೊತೆ ನಂಟು ಹೊಂದಿರುವುದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ದರ್ರಾಂಗ್ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ ಎಂದು ಪಿಎಫ್‌ಐ ತನ್ನನ್ನು ಸಮರ್ಥಿಸಿಕೊಂಡಿದೆ.
ರಿಪಬ್ಲಿಕ್ ಟಿವಿ ಪ್ರಸಾರ ಮಾಡಿದ ಸುದ್ದಿ ಅಸಹ್ಯಕರವೂ, ಚಿಂತೆಗೆ ದೂಡುವಂಥದ್ದೂ ಅಗಿದ್ದು ಸುಳ್ಳಿನಿಂದ ಕೂಡಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಳಂಕ ತರುವಂಥದ್ದಾಗಿದೆ ಎಂದು ಪಿಎಫ್‌ಐ ಆರೋಪಿಸಿದೆ.
“ಆರೋಪಿಗಳು ಉದ್ದೇಶಪೂರ್ವಕವಾಗಿ ಇಂತಹ ಮಾನಹಾನಿಕರ ಮತ್ತು ಅವಹೇಳನಕಾರಿ ಆರೋಪಗಳನ್ನು ಫಿರ್ಯಾದಿಯ ವರ್ಚಸ್ಸಿಗೆ ಕಳಂಕ ತರುವ ಉದ್ದೇಶದಿಂದ ಮಾಡಿದ್ದಾರೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.
ತಪ್ಪು ವರದಿಗಾರಿಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಲಿಖಿತವಾಗಿ ಬೇಷರತ್ ಕ್ಷಮೆ ಕೋರುವಂತೆ ಸೆಪ್ಟೆಂಬರ್ 30ರಂದು ಕಾನೂನು ಬದ್ಧವಾಗಿ ನೋಟಿಸ್ ಜಾರಿಗೊಳಿಸಲಾಗಿತ್ತು. ಇದಕ್ಕೆ ರಿಪಬ್ಲಿಕ್ ಟಿವಿಯು ತಪ್ಪು ಮತ್ತು ನುಣಿಚಿಕೊಳ್ಳುವ ಪ್ರತಿಕ್ರಿಯೆ ನೀಡಿದೆ” ಎಂದು ಪೀಠಕ್ಕೆ ತಿಳಿಸಲಾಯಿತು.