ಅದಾನಿ ಕಂಪೆನಿಗೆ ಕಲ್ಲಿದ್ದಲು ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ: ತನಿಖೆ ನಡೆಸಲು ಸಿಬಿಐಗೆ ದೆಹಲಿ ನ್ಯಾಯಾಲಯ ಆದೇಶ
ಅದಾನಿ ಎಂಟರ್‌ಪ್ರೈಸಸ್ ಬಗ್ಗೆ ತಾಂತ್ರಿಕ ಸಮಿತಿ ಪ್ರತಿಕೂಲ ಅಭಿಪ್ರಾಯ ವ್ಯಕ್ತಪಡಿಸಿದ್ದರೂ 2012ರಲ್ಲಿ ಜಾರ್ಖಂಡ್‌ನ ಝರಿಯಾ ಕಲ್ಲಿದ್ದಲು ಘಟಕ ಹರಾಜಿನಲ್ಲಿ ಪಾಲ್ಗೊಳ್ಳಲು ಅದಕ್ಕೆ ಅವಕಾಶ ನೀಡಿದ್ದೇಕೆ ಎಂಬ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ದೆಹಲಿ ನ್ಯಾಯಾಲಯ ಇತ್ತೀಚೆಗೆ ನಿರ್ದೇಶಿಸಿದೆ. [ಸಿಬಿಐ ಮತ್ತು ರಾಮಗೋಪಾಲ್ ಇನ್ನಿತರರ ನಡುವಣ ಪ್ರಕರಣ].
ಕಳೆದ ಬುಧವಾರ ಹೊರಡಿಸಿದ ಆದೇಶದಲ್ಲಿ ಸಿಬಿಐ ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ ಅವರು ಎಎಂಆರ್ ಇಂಡಿಯಾ ಮತ್ತು ಲ್ಯಾಂಕೊ ಇನ್ಫ್ರಾಟೆಕ್ ಹೆಸರಿನ ಬೇರೆ ಎರಡು ಕಂಪೆನಿಗಳ ವಿರುದ್ಧವೂ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿದರು. ಈ ಎರಡರಲ್ಲಿ ಲ್ಯಾಂಕೋಗೆ ಕಲ್ಲಿದ್ದಲು ಘಟಕ ದೊರೆತಿತ್ತು.
ತಾಂತ್ರಿಕ ಸಮಿತಿ ಪ್ರತಿಕೂಲ ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಈ ಮೂರು ಕಂಪೆನಿಗಳಿಗೆ ಹರಾಜಿನಲ್ಲಿ ಪಾಲ್ಗೊಳ್ಳಲು ಹೇಗೆ ಅವಕಶ ನೀಡಲಾಯಿತು ಎಂಬದನ್ನು ವಿವರಿಸುವಂತೆ ಡಿಸೆಂಬರ್ 16, 202 ರಂದು ನ್ಯಾಯಾಲಯವು ಸಿಬಿಐಗೆ ಸೂಚಿಸಿತ್ತು.
ಕಾನೂನುಬದ್ಧ ಸರ್ಕಾರಿ ಅಧಿಕಾರಿಗಳಿಗೆ ಕಲ್ಲಿದ್ದಲು ಉತ್ಪಾದನೆಗೆ ಸಂಬಂಧಿಸಿದ ಪ್ರತಿಗಳನ್ನು ಸಲ್ಲಿಸದೇ ಇರುವ ಹಿನ್ನೆಲೆಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಹರಾಜಿನಲ್ಲಿ ಪಾಲ್ಗೊಳ್ಳಲು ಅರ್ಹವಲ್ಲ ಎಂದು ತಾಂತ್ರಿಕ ಪರಾಮರ್ಶನಾ ಸಮಿತಿ ಸಲಹೆ ನೀಡಿತ್ತು.
ಸಿಬಿಐನ ಪ್ರತಿಕ್ರಿಯೆ ಪರಿಗಣಿಸಿದ ನ್ಯಾಯಾಲಯ, "ಇಂಡೋನೇಷ್ಯಾ ಗಣಿಗಾರಿಕೆ ಮತ್ತು ಇಂಧನ ಇಲಾಖೆ ಹಾಗೂ ಅಲ್ಲಿನ ಪರಿಸರ ಇಲಾಖೆಗೆ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಪಿಟಿ ಲ್ಯಾಮಿಂಡೋ ಇಂಟರ್ ಮಲ್ಟಿಕಾನ್ 2010-11ನೇ ಹಣಕಾಸು ವರ್ಷದಲ್ಲಿ ಸಲ್ಲಿಸಿದ ಕಲ್ಲಿದ್ದಲು ಉತ್ಪಾದನಾ ಚಟುವಟಿಕೆಯ ತ್ರೈಮಾಸಿಕ ವರದಿಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿದೆ” ಎಂದಿತ್ತು.
ಎಎಂಆರ್ ಮತ್ತು ಲ್ಯಾಂಕೋಗೆ ಸಂಬಂಧಿಸಿದಂತೆಯೂ ಕೆಲ ವಿಚಾರಗಳಿದ್ದು ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 5ಕ್ಕೆ ನಿಗದಿಯಾಗಿದೆ.