ಅಕ್ರಮ ಬ್ಯಾನರ್‌: ಕೇಜ್ರಿವಾಲ್ ವಿರುದ್ಧ ಎಫ್ಐಆರ್ ದಾಖಲಿಸಲು ದೆಹಲಿ ನ್ಯಾಯಾಲಯ ಆದೇಶ

ದೆಹಲಿ ಆಸ್ತಿ ವಿರೂಪ ತಡೆ ಕಾಯಿದೆ- 2007ರ ನಿಯಮಾವಳಿ ಉಲ್ಲಂಘಿಸಿ ಕೇಜ್ರಿವಾಲ್ ಮತ್ತಿತರರು ದೆಹಲಿಯ ದ್ವಾರಕಾದಲ್ಲಿ ಅಕ್ರಮ ಫಲಕಗಳನ್ನು ಅಳವಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
AAP
AAP
Published on

ಅಕ್ರಮ ಬ್ಯಾನರ್‌, ಹೋರ್ಡಿಂಗ್‌ಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕ ಆಸ್ತಿ ವಿರೂಪಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಇನ್ನಿತರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೆಹಲಿ ನ್ಯಾಯಾಲಯ ಮಂಗಳವಾರ ಪೊಲೀಸರಿಗೆ ಆದೇಶಿಸಿದೆ.

ದೆಹಲಿ ಆಸ್ತಿ ವಿರೂಪಗೊಳಿಸುವಿಕೆ ತಡೆ ಕಾಯಿದೆ2007 ರ ಸೆಕ್ಷನ್ 3 ರ ಅಡಿಯಲ್ಲಿ ಅಪರಾಧ ಆರೋಪ ಹೊರಿಸಿ ಶಿವಕುಮಾರ್ ಸಕ್ಸೇನಾ ಎಂಬುವರು ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶೆ ನೇಹಾ ಮಿತ್ತಲ್ ಈ ಆದೇಶ ಹೊರಡಿಸಿದ್ದಾರೆ.

Also Read
ಸಂಸದೆ ಭಾನ್ಸುರಿ ವಿರುದ್ಧದ ಅರ್ಜಿ: ತಾನು ಅಂಚೆ ಕಚೇರಿಯಲ್ಲ ಎಂದು ಆಪ್‌ ನಾಯಕ ಸೋಮನಾಥ್ ಕಿವಿ ಹಿಂಡಿದ ದೆಹಲಿ ಹೈಕೋರ್ಟ್

ಮುಂದಿನ ವಿಚಾರಣೆಯ ದಿನಾಂಕವಾದ ಮಾರ್ಚ್ 18 ರಂದು ತನ್ನ ಆದೇಶದ ಅನುಪಾಲನಾ ವರದಿ  ಸಲ್ಲಿಸುವಂತೆ ನ್ಯಾಯಾಧೀಶರು ದೆಹಲಿ ಪೊಲೀಸರಿಗೆ ಆದೇಶಿಸಿದರು.

"ಡಿಪಿಡಿಪಿ ಕಾಯಿದೆ 2007ರ ಸೆಕ್ಷನ್ 3ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧದ ಗಂಭೀರತೆ ಕೃತ್ಯದಲ್ಲಿ ಕಂಡುಬರುತ್ತಿದ್ದು, ಇದು ನಗರದ ಸೌಂದರ್ಯವನ್ನು ನಾಶಪಡಿಸುವುದಲ್ಲದೆ, ಸುಗಮ ಸಂಚಾರಕ್ಕೆ ಅಪಾಯಕಾರಿಯಾಗಿದೆ. ಜೊತೆಗೆ ಪಾದಚಾರಿಗಳು ಮತ್ತು ವಾಹನಗಳ ಸುರಕ್ಷತೆಗೆ ಸವಾಲೊಡ್ಡುತ್ತದೆ. ಅಕ್ರಮ ಫಲಕಗಳು ಕುಸಿದು ಸಂಭವಿಸುವ ಸಾವುಗಳು ಭಾರತದಲ್ಲಿ ಹೊಸದಲ್ಲ" ಎಂದು ನ್ಯಾಯಾಲಯ ವಿವರಿಸಿದೆ.

ಕೇಜ್ರಿವಾಲ್ ಮತ್ತಿತರರು 2019ರಲ್ಲಿ ದೆಹಲಿಯ ದ್ವಾರಕಾದಲ್ಲಿ ಅಕ್ರಮ ಫಲಕಗಳನ್ನು ಅಳವಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಪೊಲೀಸರು ಈ ಹಿಂದೆ ದೂರಿನ ಬಗ್ಗೆ ಕ್ರಮ ಕೈಗೊಳ್ಳಲು ವಿಫಲರಾಗಿದ್ದರು, ಇದರಿಂದಾಗಿ ತಾವು ನ್ಯಾಯಾಲಯದ ಮೆಟ್ಟಿಲೇರಿದ್ದಾಗಿ ದೂರುದಾರ ಸಕ್ಸೇನಾ ತಿಳಿಸಿದ್ದರು.

ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ದೆಹಲಿ ಪೊಲೀಸರು 2019ರಲ್ಲಿ ದೂರು ದಾಖಲಾಗಿದ್ದು, ಪ್ರಸ್ತುತ ಆಪಾದಿತ ಸ್ಥಳದಲ್ಲಿ ಅಂತಹ ಯಾವುದೇ ಫಲಕ ಪ್ರದರ್ಶಿಸಲಾಗಿಲ್ಲ. ಆದ್ದರಿಂದ ಯಾವುದೇ ಗುರುತಿಸಬಹುದಾದ ಅಪರಾಧ ನಡೆದಿಲ್ಲ ಎಂದು ಹೇಳಿದರು.

Also Read
ಬಾನ್ಸುರಿ ವಿರುದ್ಧದ ಸೋಮನಾಥ್‌ ಅರ್ಜಿಯಲ್ಲಿ ವಿಪರೀತ ಮುದ್ರಣ ದೋಷ: ನೋಟಿಸ್‌ ನೀಡಲು ದೆಹಲಿ ಹೈಕೋರ್ಟ್ ನಿರಾಕರಣೆ

ಕುತೂಹಲಕಾರಿ ಅಂಶವೆಂದರೆ, ದೂರುದಾರರು ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸುಮಾರು 8-10 ಜನರ ಹೆಸರನ್ನು ಆರೋಪಿಗಳೆಂದು ಉಲ್ಲೇಖಿಸಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಸಲ್ಲಿಸಲಾದ ದೂರಿನಲ್ಲಿ ಹೆಚ್ಚಿನ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಪೊಲೀಸರು ವಾದಿಸಿದರು.

ವಾದ ಆಲಿಸಿದ ನ್ಯಾಯಾಲಯ ಕಾನೂನುಬಾಹಿರವಾಗಿ ಬ್ಯಾನರ್‌, ಹೋರ್ಡಿಂಗ್‌ಗಳ ಅಳವಡಿಕೆಯು ಆಸ್ತಿ ವಿರೂಪಗೊಳಿಸುವಿಕೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿತು. ದೆಹಲಿ ಆಸ್ತಿ ವಿರೂಪ ತಡೆ ಕಾಯಿದೆ- 2007ರ ಸೆಕ್ಷನ್ 3ರ ಅಡಿಯಲ್ಲಿ ಮತ್ತು ಪ್ರಕರಣದಲ್ಲಿ ಎಸಗಲಾಗಿದೆ ಎಂದು ಕಂಡುಬರುವ ಅಪರಾಧಗಳಿಗೆ ಸೂಕ್ತವಾದ ಯಾವುದೇ ಸೆಕ್ಷನ್‌ನಡಿ ಎಫ್ಐಆರ್ ದಾಖಲಿಸಲು ಪೊಲೀಸರಿಗೆ ಅದು ಆದೇಶಿಸಿತು.

Kannada Bar & Bench
kannada.barandbench.com