ದೆಹಲಿ ಗಲಭೆ: ಪೊಲೀಸರು ಸಲ್ಲಿಸಿರುವುದು ಅರೆಬೆಂದ ಆರೋಪಪಟ್ಟಿಗಳು, ತನಿಖೆಯೂ ಕಳಪೆ ಎಂದ ನ್ಯಾಯಾಲಯ

ಇಂತಹ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿಗೆ ಪ್ರಕರಣದ ಅಂಶಗಳನ್ನು ವಿವರಿಸುತ್ತಿಲ್ಲ ಎನ್ನುವುದು ಕಂಡುಬರುತ್ತದೆ ಎಂಬುದಾಗಿ ನ್ಯಾಯಾಲಯ ಹೇಳಿದೆ.
Delhi Riots and Delhi Police
Delhi Riots and Delhi Police
Published on

ಬಹುತೇಕ ಗಲಭೆಗಳಲ್ಲಿ ತನಿಖೆಯ ಗುಣಮಟ್ಟ ತುಂಬಾ ಕಳಪೆಯಾಗಿದ್ದು ಅಂತಹ ಸಂದರ್ಭಗಳಲ್ಲಿ ಪೊಲೀಸರು ಅರೆಬೆಂದ ಆರೋಪಪಟ್ಟಿಗಳನ್ನು ಸಲ್ಲಿಸುತ್ತಾರೆ ಎಂದು ದೆಹಲಿ ನ್ಯಾಯಾಲಯವೊಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ಆರೋಪಿಗಳಾದ ಅಶ್ರಫ್‌ ಅಲಿ ಮತ್ತು ಪರ್ವೇಜ್‌ ವಿರುದ್ಧ ಗಲಭೆ ಮತ್ತಿತರ ಆರೋಪಗಳನ್ನು ನಿಗದಿಪಡಿಸುವ ಆದೇಶಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿನೋದ್ ಯಾದವ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯ ಹೇಳಿದ ಅಂಶಗಳು:

  • ನ್ಯಾಯಾಲಯದಲ್ಲಿ ಅರೆಬೆಂದ ಆರೋಪಪಟ್ಟಿಗಳನ್ನು ಸಲ್ಲಿಸಿದ ಬಳಿಕ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಬಗ್ಗೆ ಪೊಲೀಸರು ತಲೆಕೆಡಿಸಿಕೊಳ್ಳುವುದಿಲ್ಲ. ಪರಿಣಾಮ ಅನೇಕ ಪ್ರಕರಣಗಳಲ್ಲಿ ಬಂಧಿತರಾದ ಆರೋಪಿಗಳು ಜೈಲಿನಲ್ಲಿ ಕೊಳೆಯುವಂತಾಗಿದೆ.

  • ಹೀಗಾಗಿ ತಕ್ಷಣದ ಪರಿಹಾರ ಕ್ರಮ ಕೈಗೊಳ್ಳಲು ತನ್ನ ಅವಲೋಕನಗಳನ್ನು ಗಮನಿಸಬೇಕಾದ ಸಮಯ ಈಗ ಪೊಲೀಸರಿಗೆ ಬಂದಿದೆ.

  • ಇಂತಹ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿಗೆ ಪ್ರಕರಣದ ಅಂಶಗಳನ್ನು ವಿವರಿಸುತ್ತಿಲ್ಲ. ಪ್ರಕರಣದ ವಿಚಾರಣೆ ಇರುವ ದಿನ ಬೆಳಗ್ಗೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿಗೆ ಆರೋಪಪಟ್ಟಿಗಳ ಪಿಡಿಎಫ್‌ಗಳನ್ನು ಕಳುಹಿಸುವದಕ್ಕೆ ಮಾತ್ರವೇ ಸೀಮಿತವಾಗುತ್ತಿದ್ದಾರೆ.

  • ಈ ನಿಟ್ಟಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ತಜ್ಞರ ನೆರವು ಪಡೆಯಲು ಮುಕ್ತರಾಗಿದ್ದಾರೆ ಇಲ್ಲದೇ ಹೋದರೆ ಈ ಪ್ರಕರಣಗಳಲ್ಲಿ ಭಾಗಿಯಾದ ವ್ಯಕ್ತಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ.

  • ಬಹುತೇಕ ಗಲಭೆಗಳಲ್ಲಿ ತನಿಖೆಯ ಗುಣಮಟ್ಟ ತುಂಬಾ ಕಳಪೆ.

  • ಪ್ರಸ್ತುತ ಪ್ರಕರಣದಲ್ಲಿ ಆರೋಪಿತ ವ್ಯಕ್ತಿಗಳ ವಿರುದ್ಧ ಆರೋಪಗಳನ್ನು ನಿಗದಿಪಡಿಸಲು ಸಾಕಷ್ಟು ದಾಖಲೆಗಳು ಲಭ್ಯ ಇವೆ.

  • ಇಲ್ಲಿಯವರೆಗೆ, ತನಿಖಾ ಸಂಸ್ಥೆಯು ಈ ಪ್ರಕರಣದಲ್ಲಿ ಯಾವುದೇ ಆರೋಪಿತ ವ್ಯಕ್ತಿಯನ್ನು ಗುರುತಿಸಲು/ ಬಂಧಿಸಲು ಸಾಧ್ಯವಾಗಲಿಲ್ಲ, ಇದು ತುಂಬಾ ಆಶ್ಚರ್ಯಕರವಾಗಿದ್ದು ತಮ್ಮ ಸುಳ್ಳು ಆರೋಪಗಳ ಕಡೆಗೆ ಬೊಟ್ಟು ಮಾಡುತ್ತದೆ.

ಈ ಹಿಂದಿನ ವಿಚಾರಣೆಯ ವೇಳೆಯೂ ನ್ಯಾಯಾಲಯ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿತ್ತು. ಬಹುತೇಕ ಸಂದರ್ಭಗಳಲ್ಲಿ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ. ವಿಚಾರಣೆಯ ದಿನ ಬೆಳಿಗ್ಗೆ ತನಿಖಾಧಿಕಾರಿಗಳು ಇಮೇಲ್‌ ಮೂಲಕ ಆರೋಪಪಟ್ಟಿಯ ಪಿಡಿಎಫ್‌ ಕಳಿಸಿಕೊಡುತ್ತಾರೆ. ಆಗ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳಿಗೆ ಪ್ರಕರಣವನ್ನು ಆಳವಾಗಿ ಅಧ್ಯಯನ ಮಾಡಲಾಗದು ಇತ್ಯಾದಿ ಅಂಶಗಳನ್ನು ನ್ಯಾಯಾಲಯ ಹೇಳಿತ್ತು.

ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆರ್‌ಸಿಎಸ್ ಭಡೋರಿಯಾ ಸರ್ಕಾರದ ಪರವಾಗಿ ಹಾಜರಾದರು, ಅಲಿ ಪರವಾಗಿ ವಕೀಲ ಸಲೀಂ ಮಲಿಕ್ ಮತ್ತು ಜಡ್‌. ಬಾಬರ್ ಚೌಹಾನ್‌ ಅವರು ಆರೋಪಿ ಪರ್ವೇಜ್‌ ಪರವಾಗಿ ವಾದಿಸಿದರು.

Kannada Bar & Bench
kannada.barandbench.com