ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ: ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ದೆಹಲಿ ನ್ಯಾಯಾಲಯ

ಸಾರ್ವಜನಿಕರ ಒತ್ತಡವಿದೆ ಎಂಬುದು ಪ್ರಕರಣದ ತನಿಖೆಗೆ ಅಡ್ಡಿಯಾಗಬಾರದು ಎಂದು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅನಾಮಿಕಾ ಹೇಳಿದ್ದಾರೆ.
ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ: ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ದೆಹಲಿ ನ್ಯಾಯಾಲಯ

ಕಳೆದ ನವೆಂಬರ್‌ನಲ್ಲಿ ನ್ಯೂಯಾರ್ಕ್‌ನಿಂದ ದೆಹಲಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಆರೋಪಿ ಶಂಕರ್‌ ಮಿಶ್ರಾನನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಲು ದೆಹಲಿಯ ನ್ಯಾಯಾಲಯವೊಂದು ಶನಿವಾರ ನಿರಾಕರಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಮಿಶ್ರಾನನ್ನು 3 ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸುವಂತೆ ದೆಹಲಿ ಪೊಲೀಸರು ಕೋರಿದ್ದರು. ಆದರೆ ಇದಕ್ಕೆ ಒಪ್ಪದ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅನಾಮಿಕಾ ಅವರು ʼಸಾರ್ವಜನಿಕರ ಒತ್ತಡವಿದೆ ಎಂಬುದು ಪ್ರಕರಣದ ತನಿಖೆಗೆ ಅಡ್ಡಿಯಾಗಬಾರದುʼ ಎಂದರು. ಆ ಮೂಲಕ ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

“ಈ ನ್ಯಾಯಾಲಯ ಪರಿಗಣಿಸಿದ ಅಭಿಪ್ರಾಯದಲ್ಲಿ ಇತರೆ ಸಾಕ್ಷಿಗಳ ವಿಚಾರಣೆ ವೇಳೆ ಆರೋಪಿಯ ಭೌತಿಕ ಉಪಸ್ಥಿತಿ ಅಗತ್ಯವಿರದಿದ್ದರೆ ಆತನನ್ನು ಪೊಲೀಸ್‌ ವಶಕ್ಕೆ ಪಡೆಯದೆಯೇ ಸಿಆರ್‌ಪಿಸಿ ಸೆಕ್ಷನ್‌ 164ರ ಹೇಳಿಕೆ ದಾಖಲಿಸಬಹುದು. ಮೇಲಿನ ಕಾರಣಕ್ಕೆ ಪೊಲೀಸರು ಸಲ್ಲಿಸಿರುವ ಅರ್ಜಿಯನ್ನು ನಿರಾಕರಿಸಲಾಗಿದೆ. ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ” ಎಂದು ನ್ಯಾಯಾಲಯ ಹೇಳಿತು.

ನ್ಯೂಯಾರ್ಕ್‌ನಿಂದ ದೆಹಲಿಗೆ ಹೊರಟಿದ್ದ ಟಾಟಾ ಸಮೂಹ ಮಾಲೀಕತ್ವದ ಏರ್‌ ಇಂಡಿಯಾ ವಿಮಾನದಲ್ಲಿ ಕುಡಿದ ಅಮಲಿನಲ್ಲಿ 70 ವರ್ಷದ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಆರೋಪ ಮಿಶ್ರಾ ಮೇಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಮಿಶ್ರಾನನ್ನು ದೆಹಲಿ ಪೊಲೀಸರು ಬಂಧಿಸಿದ್ದರು.  ಮಹಿಳೆ ಟಾಟಾ ಗ್ರೂಪ್ ಅಧ್ಯಕ್ಷರಿಗೆ ಪತ್ರ ಬರೆದ ನಂತರ ಈ ಘಟನೆ ಬೆಳಕಿಗೆ ಬಂದಿತ್ತು.

ಇತ್ತ ಮಿಶ್ರಾ ಎಸಗಿದ ಕೃತ್ಯ ತೀವ್ರವಾಗಿ ವಿಚಲಿತವಾಗುವಂತೆ ಮಾಡಿದೆ ಎಂದು ತಿಳಿಸಿದ್ದ ವೆಲ್ಸ್ ಫಾರ್ಗೋ ಕಂಪೆನಿ ಆತನನ್ನು ಕೆಲಸದಿಂದ ವಜಾ ಮಾಡಿತ್ತು. ಮಹಿಳೆಗೆ ಪರಿಹಾರ ಪಾವತಿಸಲಾಗಿದೆ ಆದರೆ ಸುಮಾರು ಒಂದು ತಿಂಗಳ ಬಳಿಕ ಮಹಿಳೆಯ ಪುತ್ರಿ ಆ ಹಣ ಹಿಂತಿರುಗಿಸಿದ್ದಾರೆ ಎಂದು ಮಿಶ್ರಾ ಪರ ವಕೀಲರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ವಿಮಾನದ ಸಿಬ್ಬಂದಿಯೂ ಸಹ ಘಟನೆಗೆ ಕಾರಣ ಎಂದು ಅವರು ವಾದಿಸಿದ್ದರು.

ಬೆಂಗಳೂರಿನಲ್ಲಿ ಮಿಶ್ರಾನನ್ನು ಬಂಧಿಸಿದ ಬಳಿಕ ಆತನನ್ನು ದೆಹಲಿಗೆ ಕರೆತರಲಾಗಿತ್ತು. ತನಿಖೆಗೆ ಮಿಶ್ರಾ ಸಹಕರಿಸುತ್ತಿಲ್ಲ ಎಂದು ಇಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಾದ ಮಂಡಿಸಿದರಾದರೂ ಅದನ್ನು ಒಪ್ಪದ ನ್ಯಾಯಾಲಯ ಸಿಬ್ಬಂದಿ ಮತ್ತು ಇತರ ಸಾಕ್ಷಿಗಳ ವಿಚಾರಣೆಗಾಗಿ ಮಿಶ್ರಾ ಅವರನ್ನು ವಶಕ್ಕೆ ಪಡೆಯುವ ಅವಶ್ಯಕತೆ ಇಲ್ಲ ಎಂದಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಶ್ರಾ ಪ್ರತ್ಯೇಕ ಜಾಮೀನು ಅರ್ಜಿ ಸಲ್ಲಿಸಿದ್ದು, ಜನವರಿ 11ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಈ ಸಂಬಂಧ ನ್ಯಾಯಾಲಯವು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

Related Stories

No stories found.
Kannada Bar & Bench
kannada.barandbench.com