ಮಾನಹಾನಿ ಮೊಕದ್ದಮೆ: ರಾಜಸ್ಥಾನ ಸಿಎಂ ಗೆಹ್ಲೋಟ್‌ ಅವರಿಗೆ ನೀಡಿರುವ ಸಮನ್ಸ್‌ ರದ್ದುಪಡಿಸಲು ವಿಶೇಷ ನ್ಯಾಯಾಲಯ ನಕಾರ

ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ವಿರುದ್ಧ ಸಂಜೀವಿನ ಹಗರಣದ ಸಂಬಂಧ ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ಅವರು ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಮಾನಹಾನಿ ದಾವೆಯನ್ನು ಶೆಖಾವತ್‌ ಅವರು ಹೂಡಿದ್ದಾರೆ.
Rajasthan CM Ashok Gehlot, Union minister Jal Shakti Gajendra Singh Shekhawat
Rajasthan CM Ashok Gehlot, Union minister Jal Shakti Gajendra Singh Shekhawat
Published on

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿರುವ  ಸಮನ್ಸ್‌ಗೆ ತಡೆಯಾಜ್ಞೆ ನೀಡಲು ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದ ದೆಹಲಿಯ ವಿಶೇಷ ನ್ಯಾಯಾಲಯ ನಿರಾಕರಿಸಿದೆ [ಅಶೋಕ್ ಗೆಹ್ಲೋಟ್ ವರ್ಸಸ್ ಗಜೇಂದ್ರ ಸಿಂಗ್ ಶೇಖಾವತ್].

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಎನ್‌ ಕೆ ನಾಗಪಾಲ್‌ ಅವರು ಗೆಹ್ಲೋಟ್ ವಿರುದ್ಧದ ವಿಚಾರಣೆ ಅಥವಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರ್ದೇಶನವನ್ನು ತಡೆಹಿಡಿಯಲು "ಯಾವುದೇ ಕಾರಣ ಅಥವಾ ಆಧಾರವಿಲ್ಲ" ಎಂದು ಹೇಳಿದ್ದಾರೆ.

ಅವರು ತಮ್ಮ ಅದೇಶದಲ್ಲಿ, “ಈ ನ್ಯಾಯಾಲಯವು ಮೇಲ್ಕಂಡ ದೂರಿನ ಪ್ರಕರಣದ ವಿಚಾರಣೆಯನ್ನು ತಡೆಹಿಡಿಯಲು ಯಾವುದೇ ಕಾರಣ ಅಥವಾ ಆಧಾರವನ್ನು ಕಾಣುತ್ತಿಲ್ಲ. ವಿಡಿಯೊ ಕಾನ್ಫೆರೆನ್ಸ್ ಅಥವಾ ಹೈಬ್ರಿಡ್ ವಿಚಾರಣೆಯ ಮುಖೇನ ಅರ್ಜಿದಾರರು ಈ ನ್ಯಾಯಾಲಯದಲ್ಲಿ ಏಕೆ ಹಾಜರಾಗಲು ಸಾಧ್ಯವಿಲ್ಲ, ಅದರಲ್ಲಿಯೂ ಈ ವಿಧಾನಕ್ಕೆ ದೆಹಲಿ ನ್ಯಾಯಾಲಯಗಳಿಗೆ ಹೈಕೋರ್ಟ್‌ ಅನುಮತಿ ನೀಡಿದ್ದಾಗ್ಯೂ ಇದೇಕೆ ಸಾಧ್ಯವಿಲ್ಲ”ಎಂದು ಪ್ರಶ್ನಿಸಿದ್ದಾರೆ.

ಸಂಜೀವಿನ ಹಗರಣದ ಸಂಬಂಧ ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ಅವರು ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ವಿರುದ್ಧ ವ್ಯಾಪಕ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗೆಹ್ಲೋಟ್ ವಿರುದ್ಧ ಮಾನಹಾನಿ ದಾವೆಯನ್ನು ಶೆಖಾವತ್‌ ಅವರು ಹೂಡಿದ್ದಾರೆ.

ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ಜುಲೈ 6 ರಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ಶೇಖಾವತ್ ವಿರುದ್ಧ ಗೆಹ್ಲೋಟ್ ಅವರು "ನಿರ್ದಿಷ್ಟ ಮಾನನಷ್ಟ ಹೇಳಿಕೆಗಳನ್ನು" ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದರು.

ತಮ್ಮ ಆದೇಶದಲ್ಲಿ ಅವರು "ಆರೋಪಿಯ ಮಾನಹಾನಿಕರ ಹೇಳಿಕೆಗಳು ಪತ್ರಿಕೆ,ವಿದ್ಯುನ್ಮಾನ ಮಾಧ್ಯಮ,ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿವೆ. ಇದು ಸಮಾಜದಲ್ಲಿ ಸರಿಯಾದ ರೀತಿಯಲ್ಲಿ ಚಿಂತಿಸುವ ಜನತೆಯು ದೂರುದಾರರನ್ನು ಅನುಮಾನಿಸುವಂತೆ ಮಾಡಿದೆ" ಎಂದು ಅದು ಹೇಳಿದ್ದರು.

ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಈ ಆದೇಶದ ವಿರುದ್ಧ ಗೆಹ್ಲೋಟ್‌ ಅವರು ತಮ್ಮ ವಕೀಲರ ಮೂಲಕ ಸಲ್ಲಿಸಿದ್ದ ಪರಿಶೀಲನಾ ಮನವಿಯಲ್ಲಿ ಆದೇಶವು "ತಪ್ಪು, ಕಾನೂನುಬಾಹಿರ ಮತ್ತು ಅನುಚಿತ" ಎಂದು ವಾದಿಸಿದ್ದಾರೆ.

ಇಂದು ಎರಡೂ ಪಕ್ಷಕಾರರ ವಾದಗಳನ್ನು ಆಲಿಸಿದ ನ್ಯಾಯಾಲಯವು ಅಂತಿಮವಾಗಿ ಗೆಹ್ಲೋಟ್‌ ಅವರಿಗೆ ನೀಡಲಾಗಿರುವ ಸಮನ್ಸ್‌ಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ 19ಕ್ಕೆ ಮುಂದೂಡಿತು.

Kannada Bar & Bench
kannada.barandbench.com