ಶರ್ಜೀಲ್ ಇಮಾಮ್
ಶರ್ಜೀಲ್ ಇಮಾಮ್

ಸಿಎಎ ವಿರೋಧಿ ಭಾಷಣ: ದೇಶದ್ರೋಹ, ಯುಎಪಿಎ ಪ್ರಕರಣದಲ್ಲಿ ಶಾರ್ಜೀಲ್‌ ಇಮಾಮ್‌ಗೆ ಜಾಮೀನು ನಿರಾಕರಣೆ

ಕಡ್‌ಕಡ್‌ಡೂಮ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯಿ ಅವರಿಂದ ಅದೇಶ ಪ್ರಕಟ.

ದೆಹಲಿಯ ಜಾಮಿಯಾ ಪ್ರದೇಶ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (ಎಎಂಯು) ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ದೇಶದ್ರೋಹ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ (ಯುಎಪಿಎ) ವಿದ್ಯಾರ್ಥಿ ಹೋರಾಟಗಾರ ಶಾರ್ಜೀಲ್‌ ಇಮಾಮ್ ಅವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಶನಿವಾರ ಶಾಸನಬದ್ಧ ಜಾಮೀನು ನಿರಾಕರಿಸಿದೆ.

ಕಡ್‌ಕಡ್‌ಡೂಮ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯಿ ಅವರು ಈ ಆದೇಶ ಪ್ರಕಟಿಸಿದರು.

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ವಿರೋಧಿ ಪ್ರತಿಭಟನೆ ನಡೆಸುವಾಗ ಎಎಂಯು ಮತ್ತು ಜಾಮಿಯಾ ಪ್ರದೇಶದಲ್ಲಿ ಇಮಾಮ್ ಅವರು ಮಾಡಿದ ಭಾಷಣಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಸಂಬಂಧ ಅವರನ್ನು ಜನವರಿ 28, 2020ರಂದು ಬಂಧಿಸಲಾಗಿತ್ತು. ಜುಲೈ 2022ರಲ್ಲಿ, ವಿಚಾರಣಾ ನ್ಯಾಯಾಲಯ ಅವರ ಮೊದಲ ಜಾಮೀನು ಅರ್ಜಿ ತಿರಸ್ಕರಿಸಿತ್ತು.

ಗರಿಷ್ಠ ಏಳು ವರ್ಷಗಳ ಶಿಕ್ಷೆಯಲ್ಲಿ ಅವರು ಈಗಾಗಲೇ ನಾಲ್ಕು ವರ್ಷಗಳನ್ನು ಜೈಲಿನಲ್ಲಿ ಕಳೆದಿರುವುದರಿಂದ ತಾನು ಶಾಸನಬದ್ಧ ಜಾಮೀನಿಗೆ ಅರ್ಹ ಎಂಬುದು ಇಮಾಮ್ ಅವರ ವಾದವಾಗಿತ್ತು.

ದೇಶದ್ರೋಹ ಪ್ರಕರಣ ದಾಖಲಿಸುವುದನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದ್ದು ತಮ್ಮ ವಿರುದ್ಧ ಹೇರಲಾದ ಯುಎಪಿಎ ಸೆಕ್ಷನ್‌ ಏಳು ವರ್ಷ ಮೀರುವ ಶಿಕ್ಷೆ ಹೊಂದಿಲ್ಲ ಎಂದು ಅವರು ಹೇಳಿದರು. ಆದರೆ, ಶಾರ್ಜೀಲ್‌ ಅವರ ವಿರುದ್ಧ ಹೊರಿಸಿರುವ ಅಪರಾಧಗಳಿಗೆ ಏಕಕಾಲದಲ್ಲಿ ಶಿಕ್ಷೆ ವಿಧಿಸುವುದನ್ನು ಪರಿಗಣಿಸಬಾರದು ಎಂದು ದೆಹಲಿ ಪೊಲೀಸರು ವಾದಿಸಿದರು.

ಇಮಾಮ್‌ ಅವರ ಜಾಮೀನು ಅರ್ಜಿಯನ್ನು ತ್ವರಿತವಾಗಿ ನಿರ್ಧರಿಸುವಂತೆ ದೆಹಲಿ ಹೈಕೋರ್ಟ್‌ ಆದೇಶಿಸಿದ್ದ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ಆದೇಶ ಪ್ರಕಟಿಸಿದೆ.

ಪ್ರಕರಣದಲ್ಲಿ ತನ್ನ ವಿರುದ್ಧ ದೇಶದ್ರೋಹ ಮತ್ತು ಯುಎಪಿಎ ಆರೋಪ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ಇಮಾಮ್ ಅವರು ಸಲ್ಲಿಸಿರುವ ಮನವಿಯನ್ನು ದೆಹಲಿ ಹೈಕೋರ್ಟ್ ಮಾರ್ಚ್ 8ರಂದು ವಿಚಾರಣೆ ನಡೆಸಲಿದೆ.

Kannada Bar & Bench
kannada.barandbench.com