ಜನವರಿ 26 ರಂದು ದೆಹಲಿಯಲ್ಲಿ ನಡೆದ ಟ್ರಾಕ್ಟರ್ ಮೆರವಣಿಗೆ ವೇಳೆ ಕೆಂಪುಕೋಟೆಗೆ ಹಾನಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್‌ಐ) ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ದೆಹಲಿಯ ನ್ಯಾಯಾಲಯವೊಂದು ಪಂಜಾಬಿ ನಟ ದೀಪ್ ಸಿಧುಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇದೇ ವೇಳೆ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಬೇಕೆಂಬ ಮನವಿಯನ್ನು ತಿರಸ್ಕರಿಸಿದೆ.
ಭಾನುವಾರ ದೆಹಲಿ ಪೊಲೀಸರು ಡ್ಯೂಟಿ ಮ್ಯಾಜಿಸ್ಟ್ರೇಟ್ ಎದುರು ಸಿಧು ಅವರನ್ನು ಹಾಜರುಪಡಿಸಿದ್ದರು. ಆಗ ಅವರಿಗೆ ಒಂದು ದಿನದ ಅವಧಿಯ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಸೋಮವಾರ ಪ್ರಕರಣವನ್ನು ವರ್ಚುವಲ್ ವಿಧಾನದ ಮೂಲಕ ವಿಚಾರಣೆ ನಡೆಸಿದದ ತೀಸ್ ಹಜಾರಿ ನ್ಯಾಯಾಲಯದ ಚೀಫ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಅವರಿಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ಘೊಷಿಸಿದರು.
ಪೊಲೀಸ್ ವಶಕ್ಕೆ ಒಪ್ಪಿಸುವುದನ್ನು ವಿರೋಧಿಸಿದ ಸಿಧು ಪರ ವಕೀಲರಾದ ಅಭಿಷೇಕ್ ಗುಪ್ತಾ, ಜಸ್ದೀಪ್ ಧಿಲ್ಲಾನ್ ಬಂಧನ ಅಕ್ರಮವಾಗಿದ್ದು ಕ್ರಿಮಿನಲ್ ಪ್ರಕ್ರಿಯೆಯನ್ನು ಉಲ್ಲಂಘಿಸಿದಂತಾಗುತ್ತದೆ. ಸಿಧು ಅವರನ್ನು ಒಂದು ಪ್ರಕರಣದಲ್ಲಿ ಬಂಧಿಸಲಾಗಿದ್ದು ಎಎಸ್‌ಐ ಅದೇ ರೀತಿಯ ಎಫ್‌ಐಆರ್ ದಾಖಲಿಸಿದೆ ಎಂದರು.
ಬಂಧಿಸುವುದು ತನಿಖಾಧಿಕಾರಿಯ ವಿಶೇಷಾಧಿಕಾರವಾಗಿದ್ದು ಸೂಕ್ತ ತನಿಖೆ ನಡೆಸಲು ಪೊಲೀಸ್ ವಶಕ್ಕೆ ಪಡೆಯುವುದು ಅನಿವಾರ್ಯ. ಮೊದಲ ಎಫ್‌ಐಆರ್‌ಗಿಂತಲೂ ಎಎಸ್‌ಐ ದಾಖಲಿಸಿರುವ ಎಫ್‌ಐಆರ್ ಭಿನ್ನವಾಗಿದೆ ಎಂದು ಸರ್ಕಾರಿ ವಕೀಲರು ವಾದಿಸಿದರು. ಸಿಆರ್‌ಪಿಸಿ ಸೆಕ್ಷನ್ 167ರ ಅಡಿ ತಮ್ಮನ್ನು ಬಂಧನದಿಂದ ಮುಕ್ತಗೊಳಿಸುವಂತೆ ಸಿಧು ಅವರು ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿಗಳನ್ನು ನ್ಯಾಯಾಲಯ ಏಪ್ರಿಲ್ 23 ರಂದು ಕೈಗೆತ್ತಿಕೊಳ್ಳಲಿದೆ.