ಅಬಕಾರಿ ಹಗರಣ: ಮ್ಯಾಜಿಸ್ಟ್ರೇಟ್ ಸಮನ್ಸ್‌ಗೆ ತಡೆ ನೀಡಲು ಕೋರಿದ್ದ ಕೇಜ್ರಿವಾಲ್ ಅರ್ಜಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ಎರಡು ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿದ್ದು, ಅವರು ಮಾರ್ಚ್ 16ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ.
ಅರವಿಂದ್ ಕೇಜ್ರಿವಾಲ್ ಮತ್ತು ಜಾರಿ ನಿರ್ದೇಶನಾಲಯ
ಅರವಿಂದ್ ಕೇಜ್ರಿವಾಲ್ ಮತ್ತು ಜಾರಿ ನಿರ್ದೇಶನಾಲಯಅರವಿಂದ್ ಕೇಜ್ರಿವಾಲ್ (ಫೇಸ್‌ಬುಕ್‌)

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ ಡಿ) ತನ್ನ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಮನವಿಯನ್ನು ದೆಹಲಿಯ ಸೆಷನ್ಸ್ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ತಾನು ನೀಡಿರುವ ಸಮನ್ಸ್‌ಗಳನ್ನು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್ ಅವರು ತಪ್ಪಿಸಿಕೊಂಡಿರುವ ಹಿನ್ನೆಲೆಯಲ್ಲಿ ಇ ಡಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ಈ ಕುರಿತ ವಿಚಾರಣೆಗೆ ತಡೆಯನ್ನು ಕೋರಿ ಕೇಜ್ರಿವಾಲ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣವನ್ನು ಆಲಿಸಿದ ರೌಸ್‌ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ರಾಕೇಶ್ ಸಿಯಾಲ್ ಅವರು ಕೇಜ್ರಿವಾಲ್‌ ಮನವಿಯನ್ನು ತಿರಸ್ಕರಿಸಿದ್ದಾರೆ.

ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಖುದ್ದು ಹಾಜರಿಯಿಂದ ವಿನಾಯಿತಿ ನೀಡುವಂತೆ ಕೇಜ್ರಿವಾಲ್ ಕೋರಿದ್ದರು. ಈ ಸಂಬಂಧ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸುವಂತೆ ಸೆಷನ್ಸ್‌ ನ್ಯಾಯಾಲಯ ತಿಳಿಸಿದೆ.

ಜಾರಿ ನಿರ್ದೇಶನಾಲಯ ಸಲ್ಲಿಸಿದ ಎರಡು ಪ್ರತ್ಯೇಕ ದೂರುಗಳಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರಿಗೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ದಿವ್ಯಾ ಮಲ್ಹೋತ್ರಾ ಅವರು ಸಮನ್ಸ್ ಜಾರಿ ಮಾಡಿದ್ದರು. ಮೊದಲ ದೂರಿಗೆ ಸಂಬಂಧಿಸಿದಂತೆ ಫೆಬ್ರವರಿ 7ರಂದು ಅವರಿಗೆ ಸಮನ್ಸ್ ನೀಡಲಾಗಿತ್ತು. ಎರಡನೇ ದೂರಿನ ಸಮನ್ಸ್‌ ಮಾರ್ಚ್ 7ರಂದು ಜಾರಿಯಾಗಿತ್ತು.

ಎಸಿಎಂಎಂ ನ್ಯಾಯಾಲಯ ಈ ಎರಡೂ ಪ್ರಕರಣಗಳನ್ನು ಮಾರ್ಚ್ 16ರಂದು ವಿಚಾರಣೆ ನಡೆಸಲಿದೆ.

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ (ಪಿಎಂಎಲ್ಎ) ಸಮನ್ಸ್ ನೀಡಿದ್ದರೂ ತನಿಖೆಗೆ ಹಾಜರಾಗಲು ಪದೇ ಪದೇ ವಿಫಲವಾದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ವಿರುದ್ಧ ಇ ಡಿ ದೂರು ದಾಖಲಿಸಿತ್ತು. ಹಿರಿಯ ವಕೀಲ ರಮೇಶ್ ಗುಪ್ತಾ ಮತ್ತು ವಕೀಲ ರಾಜೀವ್ ಮೋಹನ್ ಅವರು ಇಂದು ಕೇಜ್ರಿವಾಲ್ ಪರ ವಾದ ಮಂಡಿಸಿದರು.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿಯ ಹಿರಿಯ ನಾಯಕರಾದ ಮನೀಶ್‌ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಈಗಾಗಲೇ ಬಂಧನದಲ್ಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕೇಜ್ರಿವಾಲ್ ಅವರನ್ನು ಬಂಧಿಸಲು ಇಡಿ ಬಯಸಿದೆ ಎಂದು ಎಎಪಿ ಆರೋಪಿಸಿದೆ.

Related Stories

No stories found.
Kannada Bar & Bench
kannada.barandbench.com