ಅಬಕಾರಿ ನೀತಿ ಪ್ರಕರಣ: ಎಎಪಿ ನಾಯಕ ಸಿಸೋಡಿಯಾ ಮಾ. 17ರವರೆಗೆ ಇ ಡಿ ವಶಕ್ಕೆ

ಸಿಸೋಡಿಯಾ ಅವರನ್ನು ಹತ್ತು ದಿನಗಳ ಕಾಲ ಕಸ್ಟಡಿಗೆ ಕೋರಿ ಇ ಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.
Manish Sisodia, ED
Manish Sisodia, ED

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕ ಮತ್ತು  ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಮಾರ್ಚ್ 17ರವರೆಗೆ ಜಾರಿ ನಿರ್ದೇಶನಾಲಯದ (ಇ ಡಿ) ವಶಕ್ಕೆ ನೀಡಿ ದೆಹಲಿ ನ್ಯಾಯಾಲಯ ಶುಕ್ರವಾರ ಆದೇಶ ಪ್ರಕಟಿಸಿದೆ.

ಸಿಸೋಡಿಯಾ ಅವರನ್ನು ಹತ್ತು ದಿನಗಳ ಕಾಲ ಕಸ್ಟಡಿಗೆ ಕೋರಿ ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಪ್ರಕರಣವನ್ನು ಅಲಿಸಿದ ವಿಶೇಷ ನ್ಯಾಯಾಧೀಶ ಎಂಕೆ ನಾಗ್‌ಪಾಲ್‌ ಅವರು ಆದೇಶ ನೀಡಿದರು.

ಫೆಬ್ರವರಿ 26 ರಂದು ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿ  ತಿಹಾರ್‌ ಜೈಲಿನಲ್ಲಿದ್ದ ಸಿಸೋಡಿಯಾ ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ ಇ ಡಿ ಗುರುವಾರ ಸಂಜೆ ಬಂಧಿಸಿತ್ತು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ದೃಷ್ಟಿಕೋನದಿಂದ ಇ ಡಿ ತನಿಖೆ ನಡೆಸುತ್ತಿದೆ.  ಮಾರ್ಚ್ 6ರವರೆಗೆ ಸಿಬಿಐ ಕಸ್ಟಡಿಯಲ್ಲಿದ್ದ ಅವರಿಗೆ ಬಳಿಕ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಸಿಸೋಡಿಯಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಇತರ ಸದಸ್ಯರು ಲಂಚ ಪಡೆದು ಕೆಲವು ವ್ಯಾಪಾರಿಗಳಿಗೆ ಮದ್ಯದ ಪರವಾನಗಿ ನೀಡಿದ್ದಾರೆ ಎಂದು ಈ ಹಿಂದೆ ಆರೋಪಿಸಲಾಗಿತ್ತು. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ದೆಹಲಿ ಮುಖ್ಯ ಕಾರ್ಯದರ್ಶಿ ವರದಿ ಆಧರಿಸಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ನಂತರ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಪ್ರಕರಣ ದಾಖಲಿಸಿದ್ದವು. ಉಪಮುಖ್ಯಮಂತ್ರಿ ಸಿಸೋಡಿಯಾ ಅವರು ಶಾಸನಾತ್ಮಕ ನಿಯಮಗಳನ್ನು ಉಲ್ಲಂಘಿಸಿ ಗಣನೀಯ ಆರ್ಥಿಕ ಪರಿಣಾಮಗಳಿಗೆ ಕಾರಣವಾಗುವ ನೀತಿಯ ಅಧಿಸೂಚನೆ ಹೊರಡಿಸಿದ್ದಾರೆ ಎಂದು ವರದಿ ಹೇಳಿತ್ತು.

ಇದೇ ವೇಳೆ ಆರೋಪಪಟ್ಟಿಯಲ್ಲಿ ಸಿಸೋಡಿಯಾ ಹೆಸರಿಲ್ಲದಿದ್ದರೂ ಅವರು ಹಾಗೂ ಮತ್ತಿತರರ ವಿರುದ್ಧ ತನಿಖೆ ನಡೆಸಲಾಗಿದೆ. ಸಿಸೋಡಿಯಾ ನಿರಪರಾಧಿ ಎಂದು ಎಎಪಿ ಸಮರ್ಥಿಸಿಕೊಂಡಿತ್ತು.

Related Stories

No stories found.
Kannada Bar & Bench
kannada.barandbench.com