ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ರನ್ನು ಮಾರ್ಚ್‌ 28ರವರೆಗೆ ಇ ಡಿ ಕಸ್ಟಡಿಗೆ ನೀಡಿದ ನ್ಯಾಯಾಲಯ

ಅಬಕಾರಿ ನೀತಿ ರೂಪಿಸುವ ವಿಚಾರದಲ್ಲಿ ಕೇಜ್ರಿವಾಲ್‌ ಅವರು ನೇರವಾಗಿ ಭಾಗಿಯಾಗಿದ್ದು, ಪ್ರಮುಖ ಸಂಚುಕೋರನಾಗಿದ್ದಾರೆ. ಹೀಗಾಗಿ, ಅವರನ್ನು ವಿಚಾರಣೆಗೆ ಒಳಪಡಿಸಲು ಹತ್ತು ದಿನ ಕಸ್ಟಡಿಗೆ ನೀಡುವಂತೆ ಜಾರಿ ನಿರ್ದೇಶನಾಲಯ ಕೋರಿತ್ತು.
Delhi Chief Minister, Arvind Kejriwal
Delhi Chief Minister, Arvind Kejriwal

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಮಾರ್ಚ್‌ 28ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಶುಕ್ರವಾರ ದೆಹಲಿಯ ವಿಶೇಷ ನ್ಯಾಯಾಲಯ ನೀಡಿದೆ.

ಜಾರಿ ನಿರ್ದೇಶನಾಲಯ ಮತ್ತು ಕೇಜ್ರಿವಾಲ್‌ ಪರ ವಕೀಲರ ವಿಸ್ತೃತ ವಾದ ಆಲಿಸಿದ ರೋಸ್‌ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ರಿಮ್ಯಾಂಡ್‌ ಆದೇಶ ಮಾಡಿದರು.

ಅಬಕಾರಿ ನೀತಿ ರೂಪಿಸುವ ವಿಚಾರದಲ್ಲಿ ಕೇಜ್ರಿವಾಲ್‌ ಅವರು ನೇರವಾಗಿ ಭಾಗಿಯಾಗಿದ್ದು, ಪ್ರಮುಖ ಸಂಚುಕೋರನಾಗಿದ್ದಾರೆ. ಹೀಗಾಗಿ, ಅವರನ್ನು ವಿಚಾರಣೆಗೆ ಒಳಪಡಿಸಲು ಹತ್ತು ದಿನ ಕಸ್ಟಡಿಗೆ ನೀಡುವಂತೆ ಜಾರಿ ನಿರ್ದೇಶನಾಲಯ ಕೋರಿತ್ತು.

ಇದಕ್ಕೂ ಮುನ್ನ, ಜಾರಿ ನಿರ್ದೇಶನಾಲಯದ ಪರವಾಗಿ ವಾದಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು “ಮುಖ್ಯಮಂತ್ರಿಯಾಗಿ ಅರವಿಂದ್‌ ಕೇಜ್ರಿವಾಲ್‌ ಪಿತೂರಿಯ ಪ್ರಮುಖ ಸಂಚುಕೋರ. ಅಬಕಾರಿ ನೀತಿ ರೂಪಿಸುವುದರಲ್ಲಿ ಕೇಜ್ರಿವಾಲ್‌ ನೇರವಾಗಿ ಭಾಗಿಯಾಗಿದ್ದಾರೆ… ಗೋವಾ ಚುನಾವಣೆಯ ಪ್ರಚಾರದಲ್ಲಿ ಹಾಗೂ ಅಪರಾಧದ ಆದಾಯದ ನಿರ್ವಹಣೆಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಕೇಜ್ರಿವಾಲ್‌ ಉದ್ದೇಶಪೂರ್ವಕವಾಗಿ ಸಮನ್ಸ್‌ಗಳಿಗೆ ಉತ್ತರಿಸಿಲ್ಲ. ಸಮನ್ಸ್‌ಗೆ ಅವಿಧೇಯವಾಗಿರುವ ಅವರ ನಡೆ ಇದೆ… ಪರಿಶೀಲನೆಯ ಸಂದರ್ಭದಲ್ಲಿ ಅವರು ವಾಸ್ತವ ಸಂಗತಿಗಳನ್ನು ಹೇಳಿಲ್ಲ. ಅವರು ತನಿಖೆಗೆ ಸಹಕರಿಸುತ್ತಿರಲಿಲ್ಲ. ನಾವು ಅವರನ್ನು ತನಿಖೆಗೆ ಒಳಪಡಿಸಿ, ಮಾಹಿತಿ ಪಡೆಯಬೇಕಿದೆ. ಹಗರಣ ಮತ್ತು ವಂಚನೆ ನಡೆದಿದೆ ಎಂದು ತೋರಿಸಲು ನಿಶ್ಚಿತ ಸಾಕ್ಷ್ಯವಿದೆ. ಆಪ್‌ನ ಗೋವಾ ವಿಧಾನಸಭಾ ಚುನಾವಣೆಗೆ ನಿಧಿ ಸಂಗ್ರಹಕ್ಕಾಗಿ ಅಬಕಾರಿ ನೀತಿ ಬದಲಾಯಿಸಲಾಗಿದೆ” ಎಂದು ವಾದಿಸಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಕೇಜ್ರಿವಾಲ್‌ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು “ಈಗ ಹೊಸ ಮಾದರಿಯನ್ನು (ಇ ಡಿ ತನಿಖೆ) ಅನುಸರಿಸಲಾಗುತ್ತಿದೆ. ನಿಮ್ಮ ಬಳಿ (ಇ ಡಿ ) ಒಬ್ಬ ಸಾಕ್ಷಿ ಇದ್ದಾನೆ, ಆತ ಮೊದಲನೇ ಅಥವಾ ಎರಡನೇ ಹೇಳಿಕೆಯಲ್ಲಿ ಕೇಜ್ರಿವಾಲ್‌ ಹೆಸರು ಉಲ್ಲೇಖಿಸಿರುವುದಿಲ್ಲ. ಆನಂತರ ಆತನನ್ನು ಬಂಧಿಸಿ ಜಾಮೀನು ಸಿಗದಂತೆ ಸತಾಯಿಸಲಾಗುತ್ತದೆ. ಆನಂತರ ಅದೇ ಸಾಕ್ಷಿಯು ಮಾಫಿ ಸಾಕ್ಷಿಯಾಗುತ್ತಾನೆ. ಒಂದು ನಿರ್ದಿಷ್ಟ ದಿನ ಅವನೊಂದು 'ಅದ್ಭುತ ಹೇಳಿಕೆ' ನೀಡುತ್ತಾನೆ. ಕೇಜ್ರಿವಾಲ್‌ ಅವರನ್ನು ಭೇಟಿ ಮಾಡಿದ್ದೇನೆ ಇತ್ಯಾದಿ.. ಇದನ್ನು ಹೊರತು ಪಡಿಸಿ ಬೇರೆ ಯಾವುದೇ ನೇರ ಸಾಕ್ಷಿ ಇಲ್ಲ. ವ್ಯಕ್ತಿಯನ್ನು ಬಂಧಿಸಿ ಅವರಿಗೆ ಕ್ಷಮಾಪಣೆ ನೀಡುವುದಾಗಿ ಹೇಳಿದರೆ ಖಂಡಿತವಾಗಿ ಅವರು ಯಾರ ಹೆಸರನ್ನಾದರೂ ಹೇಳುತ್ತಾರೆ. ಆಪ್‌ನ ನಾಲ್ವರು ಹಿರಿಯ ನಾಯಕರನ್ನು ಬಂಧಿಸಲಾಗಿದೆ. ಮೊದಲನೆಯ ಮತ ಚಲಾವಣೆಯಾಗುವುದಕ್ಕೂ ಮುನ್ನವೇ ಫಲಿತಾಂಶ ನಮ್ಮ ಮುಂದಿದೆ. ಪ್ರಜಾಪ್ರಭುತ್ವವು ಸಂವಿಧಾನದ ಮೂಲ ರಚನೆಯಾಗಿದ್ದು, ಇದಕ್ಕೆ ಆತಂಕ ಎದುರಾಗಿದೆ. ಅಸಮಾನವಾದ ವೇದಿಕೆ ಸೃಷ್ಟಿಸಲಾಗಿದೆ” ಎಂದು ಆಪಾದಿಸಿದರು.

ಕೇಜ್ರಿವಾಲ್‌ ಅವರನ್ನು ಪ್ರತಿನಿಧಿಸಿದ್ದ ಮತ್ತೊಬ್ಬ ಹಿರಿಯ ವಕೀಲ ವಿಕ್ರಮ್‌ ಚೌಧುರಿ ಅವರು “ಜಾರಿ ನಿರ್ದೇಶನಾಲಯ ನನ್ನ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಇದೆ ಎಂದು ಹೇಳುತ್ತಿದೆ. ಹೀಗಿದ್ದಾಗ ನೀತಿ ಸಂಹಿತೆ ಜಾರಿಗೆ ಬರುವವರೆಗೆ ಏತಕ್ಕಾಗಿ ಕಾಯಲಾಯಿತು? ಇದಕ್ಕಾಗಿ ಜಾರಿ ನಿರ್ದೇಶನಾಲಯ ಕಾಯುತಿತ್ತೆ? ಚುನಾವಣೆಯಲ್ಲಿ ಭಾಗವಹಿಸುವ ಹಕ್ಕು ರಾಜಕಾರಣಿಯ ಹಕ್ಕಾಗಿದೆ. ಜಾರಿ ನಿರ್ದೇಶನಾಲಯವು ತನ್ನ ಮುಖವಾಡ ಕಳಚಿ, ತಾನು ಯಾರನ್ನು ಪ್ರತಿನಿಧಿಸುತ್ತೇನೆ ಎಂಬುದನ್ನು ತೋರಿಸಬೇಕು” ಎಂದು ಬಲವಾಗಿ ಆಕ್ಷೇಪಿಸಿದರು.

Related Stories

No stories found.
Kannada Bar & Bench
kannada.barandbench.com