ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ತಿಂಗಳು ಬಂಧನಕ್ಕೊಳಗಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿಯತ ಜಾಮೀನು ಅರ್ಜಿ ಕುರಿತಂತೆ ದೆಹಲಿ ನ್ಯಾಯಾಲಯ ಗುರುವಾರ ತೀರ್ಪು ಕಾಯ್ದಿರಿಸಿದೆ.
ವೈದ್ಯಕೀಯ ಮಂಡಳಿಯ ಪರೀಕ್ಷೆಯಲ್ಲಿ ತಾನು ತಪಾಸಣೆಗೆ ಒಳಗಾಗುವ ವೇಳೆ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಕೂಡ ಹಾಜರಾಗಲು ಅವಕಾಶ ನೀಡುವಂತೆ ಕೋರಿ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮತ್ತೊಂದು ಅರ್ಜಿಗೆ ಸಂಬಂಧಿಸಿದಂತೆಯೂ ನ್ಯಾಯಾಲಯ ಆದೇಶ ಕಾಯ್ದಿರಿಸಿದೆ.
ತೀರ್ಪು ಕಾಯ್ದಿರಿಸುವ ಮುನ್ನ ಇಂದು ಮತ್ತು ನಿನ್ನೆ ಎರಡು ದಿನಗಳ ಕಾಲ ರೌಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶೆ ನಿಯಾಯ್ ಬಿಂದು ವಾದ ಆಲಿಸಿದರು.
ಎಲ್ಲಾ ವಕೀಲರು ಸಂಕ್ಷಿಪ್ತವಾಗಿ ವಾದ ಮಂಡಿಸಬೇಕೆಂದು ಸೂಚಿಸಿದ ನ್ಯಾಯಾಧೀಶೆ ಪ್ರಕರಣವನ್ನು ಅನಿರ್ದಿಷ್ಟ ಅವಧಿಯವರೆಗೆ ಬಾಕಿ ಇರಿಸಲಾಗದು ಎಂದು ಈ ಮೊದಲೇ ತಿಳಿಸಿದ್ದರು.
ಇಂದು ಇ ಡಿ ಪರ ವಾದ ಮುಂದುವರೆಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು ಕೇಜ್ರಿವಾಲ್ ಅವರ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದರು. ಲಂಚ ಪಡೆದ ಬಗ್ಗೆ ಪುರಾವೆಗಳಿಲ್ಲ ಎಂಬ ಕೇಜ್ರಿವಾಲ್ ಪರ ವಕೀಲರ ವಾದಕ್ಕೆ ಆಕ್ಷೇಪಿಸಿದ ರಾಜು ಇ ಡಿ ಗಾಳಿಯಲ್ಲಿ ಕೈಯಾಡಿಸಿ ತನಿಖೆ ನಡೆಸುತ್ತಿದೆ ಎಂದಲ್ಲ. ನಮ್ಮ ಬಳಿ ದೃಢವಾದ ಪುರಾವೆಗಳಿವೆ. ಕಿಕ್‌ಬ್ಯಾಕ್ ರೂಪದಲ್ಲಿ ನೀಡಿದ ಹಣದ ಬಗ್ಗೆ ಫೋಟೊ ಸಹಿತ ದಾಖಲೆಗಳಿವೆ. ಗೋವಾದ ಸಪ್ತತಾರಾ ಹೋಟೆಲ್‌ನಲ್ಲಿ ಕೇಜ್ರಿವಾಲ್ ತಂಗಿದ್ದು ಕಿಕ್‌ಬ್ಯಾಕ್ ಹಣದ ಮೂಲಕ ಹೋಟೆಲ್‌ನಲ್ಲಿ ತಂಗಿದ್ದಕ್ಕೆ ಸಂಬಂಧಿಸಿದ ಹಣ ಪಾವತಿಸಲಾಗಿದೆ. ಅಲ್ಲದೆ ತನ್ನ ಮೊಬೈಲ್ ಫೋನ್ ರಹಸ್ಯವಾಗಿಡುತ್ತಿರುವುದರಿಂದ ಅವರ ಬಗ್ಗೆ ಪ್ರತಿಕೂಲ ನಿರ್ಧಾರಕ್ಕೆ ಬರಬಹುದಾಗಿದೆ ಎಂದರು.
ಕೇಜ್ರಿವಾಲ್ ಅವರು ವೈಯಕ್ತಿಕವಾಗಿ ಯಾವುದೇ ಅಪರಾಧದಲ್ಲಿ ಭಾಗಿಯಾಗದಿದ್ದರೂ ಹಣ ವರ್ಗಾವಣೆ ತಡೆ ಕಾಯಿದೆಯಡಿ (ಪಿಎಂಎಲ್‌ಎ) ಅಡಿಯಲ್ಲಿ ವಿಚಾರಣೆಗೆ ಒಳಗಾಗಲೇಬೇಕು ಎಂದು ಅವರು ಪ್ರತಿಪಾದಿಸಿದರು.
ಆದರೆ ಈ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ ಎಂದು ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕ್ರಮ್ ಚೌಧರಿ ಪುನರುಚ್ಚರಿಸಿದರು. ಇ ಡಿ ಹೇಳಿದಂತೆ ಕೇಜ್ರಿವಾಲ್ ಅವರನ್ನು ಪ್ರಕರಣದಲ್ಲಿ ಸಾಮಾನ್ಯ ಮನುಷ್ಯರಂತೆಯೇ ಕಾಣಬೇಕೆ ವಿನಾ ವಿಶೇಷವಾಗಿ ನೋಡಬಾರದು ಎಂದು ಅವರು ಮಾರ್ಮಿಕವಾಗಿ ತಿಳಿಸಿದರು.