

ಐಆರ್‌ಸಿಟಿಸಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ರೌಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರಿಂದ ಬೇರೆ ನ್ಯಾಯಾಧೀಶರಿಗೆ ವರ್ಗಾವೆ ಮಾಡಬೇಕೆಂದು ಕೋರಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಬುಧವಾರ ಸಿಬಿಐ ಪ್ರತಿಕ್ರಿಯೆ ಕೇಳಿದೆ.
ಸಿಬಿಐಗೆ ನೋಟಿಸ್ ಜಾರಿ ಮಾಡಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ದಿನೇಶ್ ಭಟ್ ಡಿಸೆಂಬರ್ 6ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಹೇಳಿದರು.
ಆದರೆ ಉಳಿದ ಮೂರು ಪ್ರಕರಣಗಳಲ್ಲಿ ಸಂಬಂಧಪಟ್ಟ ತನಿಖಾ ಸಂಸ್ಥೆಗಳನ್ನು ಕಕ್ಷಿದಾರರನ್ನಾಗಿ ಮಾಡದ ಹಿನ್ನೆಲೆಯಲ್ಲಿ ನ್ಯಾಯಾಲಯ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರ ನೋಟಿಸ್ ನೀಡಿತು. ಉಳಿದ ಮೂರು ಅರ್ಜಿಗಳನ್ನು ತಿದ್ದುಪಡಿ ಮಾಡಿ ಸಲ್ಲಿಸುವಂತೆ ರಾಬ್ಡಿ ಅವರಿಗೆ ಅದು ಸೂಚಿಸಿತು.
ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ವಿರುದ್ಧ ಆರೋಪ ನಿಗದಿಪಡಿಸಿದ್ದ ನ್ಯಾಯಾಧೀಶ ಗೋಗ್ನೆ ಅವರಿಂದ ನಾಲ್ಕು ಪ್ರಕರಣಗಳನ್ನು ವರ್ಗಾವಣೆ ಮಾಡಬೇಕೆಂದು ರಾಬ್ಡಿ ಅವರು ಕೋರಿದ್ದರು.
ಐಆರ್‌ಸಿಟಿಸಿ ಪ್ರಕರಣದಲ್ಲಿ, ಲಾಲು ಯಾದವ್ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಖಾಸಗಿ ಸಂಸ್ಥೆಗೆ ಗುತ್ತಿಗೆಗಳನ್ನು ನೀಡುವುದಕ್ಕಾಗಿ ಪ್ರಮುಖ ಭೂಮಿ ಮತ್ತು ಷೇರುಗಳನ್ನು ಲಂಚವಾಗಿ ಸ್ವೀಕರಿಸಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. ಪ್ರಕರಣದಲ್ಲಿ, ನ್ಯಾಯಾಲಯ ಯಾದವ್ ಕುಟುಂಬದ ವಿರುದ್ಧವೂ ಆರೋಪಗಳನ್ನು ನಿಗದಿಪಡಿಸಿತ್ತು. ಅಲ್ಲದೆ ಲಾಲೂ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ವಿವಿಧ ಆಕಾಂಕ್ಷಿಗಳಿಂದ ಜಮೀನಿನ ರೂಪದಲ್ಲಿ ಲಂಚ ಪಡೆದಿದ್ದರು ಎಂದು ಸಿಬಿಐ ದೂರಿತ್ತು. ಎರಡೂ ಪ್ರಕರಣಗಳಲ್ಲಿ ನಡೆದ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ ಡಿ) ತನಿಖೆ ನಡೆಸುತ್ತಿದೆ.
ಐಆರ್‌ಸಿಟಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 13ರಂದು, ನ್ಯಾಯಾಧೀಶ ಗೋಗ್ನೆ ಅವರು ಲಾಲು ಯಾದವ್, ರಾಬ್ಡಿ ದೇವಿ, ತೇಜಸ್ವಿ ಯಾದವ್ ಹಾಗೂ ಇತರ ಹಲವರ ವಿರುದ್ಧ ಕ್ರಿಮಿನಲ್ ಆರೋಪ ನಿಗದಿಪಡಿಸಿದ್ದರು.
ಆದರೆ ನ್ಯಾಯಾಧೀಶರು ಪಕ್ಷಪಾತಿಯಾಗಿ ವರ್ತಿಸುತ್ತಿದ್ದು ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಅನಗತ್ಯ ಒಲವು ಹೊಂದಿದ್ದಾರೆ ಎಂದು ರಾಬ್ಡಿ ದೂರಿದ್ದರು.
ನ್ಯಾಯಾಧೀಶರ ನಡೆ ಅರ್ಜಿದಾರರ ಮನದಲ್ಲಿ ಭೀತಿ ಸೃಷ್ಟಿಸಿದ್ದು ನ್ಯಾಯಯುತ ವಿಚಾರಣೆ ನಡೆಯುವ ಸಲುವಾಗಿ ಬೇರೆ ಯಾವುದಾದರೂ ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸಬೇಕು ಎಂದು ಅವರು ಕೋರಿದ್ದರು.
ನ್ಯಾಯಾಧೀಶರ ನಡವಳಿಕೆಯು ಅವರಿಂದ ನಿರೀಕ್ಷಿಸಲಾಗುವ ತಟಸ್ಥತೆಯ ಮೇಲೆ ಪರಿಣಾಮ ಬೀರುತ್ತಿದ್ದು ತಮ್ಮ ಮನಸ್ಸಿನಲ್ಲಿ ಅವರು ಪಕ್ಷಪಾತ ನಡೆಸಿರುವ ಸಾಧ್ಯತೆಯನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದರು.