ಬಿಜೆಪಿ ನಾಯಕ ಸೈಯದ್ ಶಾಹನವಾಜ್ ಹುಸೇನ್ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಖುದ್ದ ಹಾಜರಾಗಲು ಸೂಚಿಸಿ ಜಾರಿಗೊಳಿಸಿದ್ದ ಸಮನ್ಸ್ ಆದೇಶಕ್ಕೆ ದೆಹಲಿ ನ್ಯಾಯಾಲಯ ಮಂಗಳವಾರ ತಡೆ ನೀಡಿದೆ.
ಹುಸೇನ್ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ರೌಸ್ ಅವೆನ್ಯೂ ನ್ಯಾಯಾಲಯಗಳ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಂ ಕೆ ನಾಗಪಾಲ್ ಅವರು ನೋಟಿಸ್ ನೀಡಿದರು. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 8ರಂದು ನಡೆಯಲಿದೆ.
ಐಪಿಸಿ ಸೆಕ್ಷನ್ 376 (ಅತ್ಯಾಚಾರ), 328 (ಮತ್ತೊಬ್ಬರನ್ನು ಘಾಸಿಗೊಳಿಸುವ ಉದ್ದೇಶದಿಂದ ಎಸಗುವ ಅಪರಾಧ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಅಪರಾಧವನ್ನು ಪರಿಗಣಿಸಿದ್ದ ಎಸಿಎಂಎಂ ವೈಭವ್ ಮೆಹ್ತಾ ಅವರು ಹುಸೇನ್ ಅವರಿಗೆ ಸಮನ್ಸ್ ನೀಡಿದ್ದರು. ಅಕ್ಟೋಬರ್ 20 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿತ್ತು.
ಪ್ರಕರಣ ರದ್ದತಿ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ವರದಿಯನ್ನು ನ್ಯಾಯಾಲಯ ಒಪ್ಪಿರಲಿಲ್ಲ ಬದಲಿಗೆ ಅತ್ಯಾಚಾರ ಸಂತ್ರಸ್ತೆ ಸಲ್ಲಿಸಿದ್ದ ಪ್ರತಿರೋಧ ಅರ್ಜಿಯನ್ನು ಪುರಸ್ಕರಿಸಿತ್ತು.