ದೆಹಲಿ ಧರ್ಮ ಸಂಸದ್‌ನಲ್ಲಿ ದ್ವೇಷಭಾಷಣದ ಅಂಶಗಳಿರಲಿಲ್ಲ ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧ ಯಾವುದೇ ನಿರ್ದಿಷ್ಟ ಪದಗಳನ್ನು ಕಾರ್ಯಕ್ರಮದಲ್ಲಿ ಬಳಸಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ [ಕುರಾನ್ ಅಲಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಅಲ್ಲದೆ ದೆಹಲಿಯ ಗೋವಿಂದಪುರಿಯಲ್ಲಿ ನಡೆದ ಹಿಂದೂ ಯುವ ವಾಹಿನಿ ಕಾರ್ಯಕ್ರಮದಲ್ಲಿ ಸುದರ್ಶನ್ ಟಿವಿ ಮುಖ್ಯಸ್ಥ ಸುರೇಶ್ ಚವ್ಹಾಣ್ಕೆ ಅವರು ಮಾಡಿದ ಭಾಷಣ ದ್ವೇಷ ಭಾಷಣವಲ್ಲ ಎಂದು ಪೊಲೀಸರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಚವ್ಹಾಣ್ಕೆ ಭಾಷಣದಲ್ಲಿ ಮುಸ್ಲಿಮರು ಭೂಮಿ ಬಾಕರು ಅಥವಾ ನೆಲ ಭಕ್ಷಕರು ಎಂದು ಎಲ್ಲಿಯೂ ಹೇಳಿಲ್ಲ ಅಥವಾ ಯಾವುದೇ ಸಮುದಾಯದ ವಿರುದ್ಧ ಅವರ ಭಾಷಣ ಉತ್ಪ್ರೇಕ್ಷೆಯ ಮಾತುಗಳನ್ನಾಡಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.
ಕಾರ್ಯಕ್ರಮದ ವಿರುದ್ಧದ ದೂರುಗಳ ಕುರಿತು ತಾವು ಪ್ರಾಥಮಿಕ ವಿಚಾರಣೆ ನಡೆಸಿದ್ದು, ಭಾಷಣದ ವಿಡಿಯೋ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸಲಾಗಿದೆ ಎಂದು ಪೊಲೀಸರು ಸಲ್ಲಿಸಿರುವ ಅಫಿಡವಿಟ್ ಹೇಳಿದೆ.
"ಜನಾಂಗೀಯ ಶುದ್ಧೀಕರಣ ಸಾಧಿಸುವ ಸಲುವಾಗಿ ಮುಸ್ಲಿಮರ ಹತ್ಯಾಕಾಂಡಕ್ಕೆ ಬಹಿರಂಗ ಕರೆ ನೀಡಿಲ್ಲ ಅಥವಾ ಭಾಷಣದಲ್ಲಿ ಇಡೀ ಸಮುದಾಯವನ್ನು ಕೊಲ್ಲುಲಾಗುತ್ತದೆ ಎಂದು ಅರ್ಥೈಸುವ ಅಥವಾ ವ್ಯಾಖ್ಯಾನಿಸುವ ಪದಗಳು ಬಳಕೆಯಾಗಿಲ್ಲ" ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಹರಿದ್ವಾರ ಧರ್ಮ ಸಂಸದ್ ಮತ್ತು ದೆಹಲಿ ಧರ್ಮ ಸಂಸದ್‌ನಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಕುರಾನ್ ಅಲಿ ಎಂಬುವವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಸಲ್ಲಿಸಲಾಗಿದೆ.
ದೆಹಲಿಯಲ್ಲಿ 2021ರ ಡಿಸೆಂಬರ್ 17ರಿಂದ 19ರವರೆಗೆ ಆಯೋಜಿಸಲಾಗಿದ್ದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಹತ್ಯಾಕಾಂಡಕ್ಕೆ ಬಹಿರಂಗ ಕರೆ ನೀಡಲಾಗಿತ್ತು. ಅಂತರ್ಜಾಲದಲ್ಲಿ ಈ ಬಗ್ಗೆ ದಾಖಲೆಗಳು ದೊರೆಯುತ್ತವಾದರೂ ದೆಹಲಿ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಅರ್ಜಿ ಆರೋಪಿಸಿತ್ತು. ಈ ಸಂಬಂಧ ಜನವರಿ 12ರಂದು ಸುಪ್ರೀಂ ಕೋರ್ಟ್ ಪ್ರತಿವಾದಿಗಳಿಗೆ ನೋಟಿಸ್ ನೀಡಿತ್ತು.