ಅಬಕಾರಿ ನೀತಿ ಪ್ರಕರಣ: ಸಿಬಿಐ ಬಂಧನ ರದ್ದುಗೊಳಿಸಿ, ಜಾಮೀನು ನೀಡುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ರದ್ದುಗೊಳಿಸಲು ದೆಹಲಿ ಹೈಕೋರ್ಟ್ ಆಗಸ್ಟ್ 5ರಂದು ನಿರಾಕರಿಸಿತ್ತು.
Arvind Kejriwal and Supreme Court
Arvind Kejriwal and Supreme Court
Published on

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆವಾಸ ಅನುಭವಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು  ಸಿಬಿಐ ತಮ್ಮನ್ನು ಬಂಧಿಸಿರುವುದನ್ನು ರದ್ದುಗೊಳಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ  ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ [ಅರವಿಂದ್‌ ಕೇಜ್ರಿವಾಲ್ ವಿರುದ್ಧ ಸಿಬಿಐ ನಡುವಣ ಪ್ರಕರಣ].

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ರದ್ದುಗೊಳಿಸಲು ಆಗಸ್ಟ್ 5 ರಂದು ನಿರಾಕರಿಸಿದ್ದ ದೆಹಲಿ ಹೈಕೋರ್ಟ್‌ ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದಾರೆ.

Also Read
ಕೇಜ್ರಿವಾಲ್ ಸಿಬಿಐ ಬಂಧನ ಎತ್ತಿ ಹಿಡಿದ ದೆಹಲಿ ಹೈಕೋರ್ಟ್: ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ತೆರಳಲು ಸ್ವಾತಂತ್ರ್ಯ

ವಕೀಲ ವಿವೇಕ್ ಜೈನ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯನ್ನು ಸೋಮವಾರ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರೆದುರು ಪ್ರಸ್ತಾಪಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಕೋರಿದರು. ಆಗ ಸಿಜೆಐ ಈ ಕುರಿತು ಇ ಮೇಲ್‌ ಕಳಿಸುವಂತೆ ಸೂಚಿಸಿದರು.  

ಜಾರಿ ನಿರ್ದೇಶನಾಲಯ (ಇ ಡಿ) ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಕೇಜ್ರಿವಾಲ್ ಅವರನ್ನು ಜೂನ್ 26 ರಂದು ಸಿಬಿಐ  ಬಂಧಿಸಿತ್ತು .

ಇ ಡಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅವರಿಗೆ ಜಾಮೀನು ನೀಡಿದ್ದರೂ ಸಿಬಿಐ ಪ್ರಕರಣದಲ್ಲಿ ಇನ್ನೂ ಜಾಮೀನು ದೊರೆಯದೆ ಇರುವುದರಿಂದ ಅವರು ತಿಹಾರ್ ಜೈಲಿನಲ್ಲಿದ್ದಾರೆ.

Also Read
ಕೇಜ್ರಿವಾಲ್‌ ಜಾಮೀನು ಕೋರಿಕೆ: ಸಿಬಿಐ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್‌

ತಮ್ಮ ಬಂಧನ ರದ್ದುಗೊಳಿಸುವಂತೆ ಮತ್ತು ಜಾಮೀನು ನೀಡುವಂತೆ ಕೋರಿ ಕೇಜ್ರಿವಾಲ್‌ ಈ ಹಿಂದೆ ಹೈಕೋರ್ಟ್‌ಗೆ ಎರಡು  ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಬಂಧನ ರದ್ದತಿ ಮನವಿಯನ್ನು ಆಗಸ್ಟ್ 5 ರಂದು ತಿರಸ್ಕರಿಸಿದ್ದ ಹೈಕೋರ್ಟ್‌ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಕೇಜ್ರಿವಾಲ್ ಅವರನ್ನು ಬಂಧಿಸಲು ಸಾಕಷ್ಟು ಆಧಾರಗಳಿವೆ ಎಂದಿದ್ದರು.  

ಜಾಮೀನಿಗೆ ಸಂಬಂಧಿಸಿದಂತೆ ಅರ್ಹತೆಯ ಆಧಾರದ ಮೇಲೆ ಅರ್ಜಿಯನ್ನು ನಿರ್ಧರಿಸಲು ನಿರಾಕರಿಸಿದ ಹೈಕೋರ್ಟ್‌ ವಿಚಾರಣಾ ನ್ಯಾಯಾಲಯಕ್ಕೆ ತೆರಳುವಂತೆ ತಿಳಿಸಿತ್ತು. ಕೇಜ್ರಿವಾಲ್‌ ಜಾಮೀನು ಕೋರಿ ನೇರವಾಗಿ ಹೈಕೋರ್ಟ್‌ ಮೊರೆ ಹೋಗಿದ್ದರು. ಇದೀಗ ಈ ಎರಡೂ ಅಂಶಗಳನ್ನು ಕೇಜ್ರಿವಾಲ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.  

Kannada Bar & Bench
kannada.barandbench.com